

ಮೈಸೂರು: ಶರಣ ನುಲಿಯ ಚಂದಯ್ಯ ಅವರ ಜಯಂತೋತ್ಸವನ್ನು ಸೆ.16ರಂದು ಆಯೋಜಿಸಲಾಗಿದೆ ಎಂದು ಜಯಂತೋತ್ಸವ ಆಚರಣಾ ಸಮಿತಿಯ ಮೋಹನ ರಾಜ್ ತಿಳಿಸಿದರು.
ಅಂದು ಮದ್ಯಾಹ್ನ 12 ಗಂಟೆಗೆ ನಗರದ ಕಲಾಮಂದಿರದಲ್ಲಿ ಸಮಾರಂಭ ಆಯೋಜಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿಮಹದೇವಪ್ಪ ಉದ್ಘಾಟಿಸಲಿದ್ದಾರೆ. ಸಚಿವ ಕೆ.ವೆಂಕಟೇಶ ಸೇರಿದಂತೆ ಮೈಸೂರು ಜಿಲ್ಲೆಯ ಎಲ್ಲ ಶಾಸಕರು ಆಗಮಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 10.30ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ವಿವಿಧ ಕಲಾ ತಂಡಗಳನ್ನೊಳಗೊಂಡ ನುಲಿನ ಚಂದಯ್ಯ ಅವರ ಭಾವಚಿತ್ರವನ್ನು ಬೆಳ್ಳಿನ ರಥದಲ್ಲಿ ಮೆರವಣಿಗೆ ಮಾಡಲಾಗುತ್ತದೆ ಎಂದು ಹೇಳಿದರು.
ಚಂದಯ್ಯ ಅವರು ಕೊರಮ, ಕೊರಚ ಸಮುದಾಯಗಳ ಆರಾಧ್ಯ ದೈವ. 12ನೇ ಶತಮಾನದಲ್ಲಿ ಬಸವಣ್ಣ ಅವರಿಗೆ ದಾಸೋಹದಲ್ಲಿ ಜೊತೆಯಾಗಿದ್ದವರು. ಬಸವಣ್ಣನ ವಿಚಾರಗಳನ್ನು ಒಪ್ಪಿ ಅವರ ಅನುಭವ ಮಂಟಪ ಸೇರಿಕೊಂಡಿದ್ದರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೊರಮ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಶೆಟ್ಟಿ, ಪದಾಧಿಕಾರಿಗಳಾದ ಶಂಕರ್, ರವಿಕುಮಾರ್, ಬಾಲರಾಜ್, ಮಹದೇವ ಇದ್ದರು.