ಶರಣ ಚಳವಳಿ ಸಾಪ್ರಜ್ಞೆ ಅಕ್ಕ ನಾಗಮ್ಮ

31 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಿವಶರಣೆ ಅಕ್ಕ ನಾಗಮ್ಮ ಶರಣ ಚಳವಳಿಯ ಸಾಕ್ಷಿ ಪ್ರಜ್ಞೆಯಾಗಿದ್ದಳು. ಬಸವಣ್ಣನವರಲ್ಲಿ ಆತ್ಮ ಶಕ್ತಿ ತುಂಬಿದವಳೇ ಅಕ್ಕನಾಗಮ್ಮ ಎಂದು ಮೃತ್ಯುಂಜಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವೀಣಾ ಯಲಿಗಾರ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಮಹಾಲಿಂಗಮ್ಮ ನಿಂಗಪ್ಪ ಸಾವಳಗಿ ದತ್ತಿ ನಿಮಿತ್ತ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಹಾನ್​ ಮಹಿಳೆ ಶರಣೆ ಅಕ್ಕ ನಾಗಲಾಂಬಿಕೆ ಕುರಿತು ಮಾತನಾಡಿದರು.

ಮಹಾಶಿವಶರಣೆ ಅಕ್ಕ ನಾಗಮ್ಮ ಬಸವಣ್ಣನವರ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಸವಣ್ಣನವರ ಎಲ್ಲ ಹೋರಾಟಕ್ಕೆ ಬೆಂಗಾವಲಾಗಿ ನಿಂತು ಚೈತನ್ಯ ಸ್ವರೂಪಗಳಾಗಿದ್ದಲ್ಲದೆ, ಬಸವಣ್ಣನವರ ಉಜ್ವಲ ಭವಿಷ್ಯ ನಿರ್ಮಿಸುವಲ್ಲಿ ಪ್ರೇರಕ ಶಕ್ತಿಯಾಗಿದ್ದಳು. ಬಸವಣ್ಣನವರ ಸಮ ಸಮಾಜ ಹಾಗೂ ಸ್ವಾತಂತ್ರ್ಯದ ಕಲ್ಪನೆಗೆ, ಬಸವಣ್ಣನವರು ಜಗತ್ತಿನ ಮೊದಲ ವಿಚಾರವಾದಿಯಾಗಿ ರೂಪಗೊಳ್ಳಲು ಅಕ್ಕನಾಗಮ್ಮ ಸಹೋದರನಿಗೆ ನೀಡಿದ ಸಂಸ್ಕಾರವೇ ಕಾರಣ ಎಂದರು.

ಡಾ. ಸಿ.ಜಿ. ಪ್ರಶಾಂತ ಮಾತನಾಡಿ, ಮಹಾಲಿಂಗಮ್ಮ ಸಾವಳಗಿ ಕುಟುಂಬ ವತ್ಸಲರು. ಎಲ್ಲರನ್ನೂ ಪ್ರೀತಿಸುವ ಅವರ ಗುಣ ದೊಡ್ಡದು. ನಾವು ಅವರಿಂದ ಕಲಿತ ಸಹಕಾರ ಗುಣ, ಜವಾಬ್ದಾರಿ ನಿರ್ವಹಣೆ ಎಂದು ಮರೆಯಲು ಸಾಧ್ಯವಿಲ್ಲ ಎಂದರು.

ದತ್ತಿದಾನಿ ಪರ ರಾಜೇಂದ್ರ ಸಾವಳಗಿ ಮಾತನಾಡಿದರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಬಸವಪ್ರಭು ಹೊಸಕೇರಿ, ವೀರಣ್ಣ ಒಡ್ಡೀನ, ಡಾ. ಮಹೇಶ ಹೊರಕೇರಿ, ಸುರೇಶ ಸಾವಳಗಿ, ಇತರರು ಇದ್ದರು.

ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಡಾ. ಶೈಲಜಾ ಅಮರಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net