

ಬೇಲೂರು: ಸಕಲ ಜೀವಾತ್ಮರಿಗೂ ಲೇಸು ಬಯಸುವ ಶರಣ ಸಾಹಿತ್ಯ ಒಂದು ಜಾತಿ, ಧರ್ಮಕ್ಕೆ ಸೀಮಿತವಾದುದಲ್ಲ ಎಂದು ಶರಣ ಸಾಹಿತ್ಯ ಪರಿಷತ್‌ನ ತಾಲೂಕು ಗೌರವಾಧ್ಯಕ್ಷ ಸಿ.ಎಂ.ನಿಂಗರಾಜ್ ಹೇಳಿದರು.
ಶರಣ ಸಾಹಿತ್ಯ ಪರಿಷತ್, ಜಿಲ್ಲಾ ಕದಳಿ ಮಹಿಳಾ ವೇದಿಕೆ, ಜಿಲ್ಲಾ ಯುವ ವೇದಿಕೆ ಹಾಗೂ ಪುರಸಭೆ ಸಹಯೋಗದಲ್ಲಿ ಪುರಸಭೆಯಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಹಾಗೂ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜಯಂತಿಯಲ್ಲಿ ಮಾತನಾಡಿದ ಅವರು, ಶರಣರ ವಚನ ಸಾಹಿತ್ಯ ಸಮಷ್ಟಿಯ ಸರ್ವತೋಮುಖ ಪ್ರಗತಿಗೆ ಶ್ರಮಿಸಿದೆ. ಇಂತಹ ಶರಣ ಸಾಹಿತ್ಯ ಪರಿಷತ್‌ನಲ್ಲಿ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಬಸವಾದಿ ಶರಣರ ಆದರ್ಶದೊಂದಿಗೆ ಪರಿಷತ್‌ಗೆ ದತ್ತಿ ನೀಡಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಶರಣರು ವಚನಗಳ ಮೂಲಕ ಸಾಮಾಜಿಕ ಚಿಂತನೆ, ವೈಚಾರಿಕತೆ, ಧಾರ್ಮಿಕ ಚಟುವಟಿಕೆಗಳ ವಿಶ್ಲೇಷಣೆ, ಕಾಯಕ ಶ್ರದ್ಧೆಯೊಂದಿಗೆ ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆ ನೀಡಿ ವಿಶ್ವಾಸ ಮೂಡಿಸಿದ್ದರು. ತಮ್ಮ ವಚನಗಳಲ್ಲಿ ಲಿಂಗಾತೀತ ನೆಲೆ ಪುರಸ್ಕರಿಸಿ, ತಾರತಮ್ಯದ ಸಮಾಜದಲ್ಲಿ ವಿಚಾರ, ವಿಮರ್ಶೆಗೆ ಅವಕಾಶ ಕೊಟ್ಟಿದ್ದು ವಚನ ಚಳವಳಿ. ಹೆಣ್ಣನ್ನು ಮಾಯೆ ಎನ್ನುತಿದ್ದ ಕಾಲಘಟ್ಟದಲ್ಲಿ ಪುರುಷನಷ್ಟೇ ಸಮಾನತೆ ನೀಡಿದ್ದು 12 ನೇ ಶತಮಾನ ಎಂದರು.
ಶರಣ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿ, ಬದುಕಿನ ಎಲ್ಲ ಆಯಾಮಗಳನ್ನು ಸ್ಪರ್ಶಿಸುವ ವಚನ ಸಾಹಿತ್ಯದ ಮೂಲಕ ಶರಣರು ಸಮಗ್ರ ಸಾಮಾಜಿಕ ಪರಿವರ್ತನೆ ಬಯಸಿದ್ದರು. ಅರಿವಿನ ಬೆಳಕನ್ನು ಹಂಚಲು ಅರಿವಿನ ಹರಿಕಾರರಾಗಿ ಶರಣರು ಪ್ರಯತ್ನಿಸಿದ್ದರು. ಶರಣರ ವಚನಗಳಲ್ಲಿ ತಾರ್ಕಿಕ, ಸಾಮಾಜಿಕ, ಚಿಂತನೆ, ಮಮಕಾರ, ಕಳಕಳಿ, ಭಕ್ತಿ ಮಾನವೀಯ ವೌಲ್ಯಗಳನ್ನು ಕಾಣಬಹುದಾಗಿದ್ದು, ಎಲ್ಲರಲೂ ಸಮಾನತೆ ಬೀಜ ಬಿತ್ತಲು ಶರಣರು ವಚನಗಳ ಮೂಲಕ ಶ್ರಮಿಸಿದರು ಎಂದರು.
ಪುರಸಭಾ ಅಧ್ಯಕ್ಷೆ ಉಷಾ, ಮುಖ್ಯಾಧಿಕಾರಿ ಬಸವರಾಜು ಶಿವ್ಗಾವಿ, ಜಿಲ್ಲಾ ಯುವ ಅಧ್ಯಕ್ಷ ಚಂದನ ಕುಮಾರ್, ಕದಳಿ ವೇದಿಕೆ ತಾಲೂಕು ಅಧ್ಯಕ್ಷೆ ಶಶಿರೇಖಾ, ಯುವ ಘಟಕ ಅಧ್ಯಕ್ಷ ಆರ್.ಎಸ್.ಮಹೇಶ್, ವೈದ್ಯಾಧಿಕಾರಿ ಡಾ.ಅನುಪಮಾಶೆಟ್ಟಿ ಇತರರಿದ್ದರು.