ಅನುಭಾವದ ಜ್ಞಾನವನ್ನು ಅನುಗ್ರಹಿಸಿದವರು ಬಸವಣ್ಣ

25 Dwd 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಬಸವಣ್ಣನವರು ಅನುಭಾವದ ಜ್ಞಾನವನ್ನು ಲೋಕಾನುಭವಿಗಳಿಗೆ ಪ್ರವಚನದ ಮೂಲಕ ಅನುಗ್ರಹಿಸಿದರು. ಇದರಿಂದ ಅವರು ರಚಿಸಿದ ವಚನಗಳು ಹೆಚ್ಚು ಪ್ರಚಲಿತಗೊಂಡವು ಎಂದು ಮನಗುಂಡಿಯ ಶ್ರೀ ಗುರು ಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ ಹೇಳಿದರು.

ನಗರದ ಮುರುಘಾಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ `ಶರಣ ಚರಿತಾಮೃತ' ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅರಿವು ಆಚಾರ ಅನುಭಾವಗಳು ಮಾನವನ ಜೀವನದ ಮಹೋನ್ನತ ಮೌಲ್ಯಗಳು. ಇವಿಲ್ಲದಿದ್ದರೆ ಬದುಕಿಗೆ ನೆಮ್ಮದಿಯ ನೆಲೆ ಇಲ್ಲ. ನೆಮ್ಮದಿ ನೆಲೆ ಇಲ್ಲದೆ ಬದುಕಿಗೆ ಬೆಲೆ ಇಲ್ಲ, ಬದುಕಿಗೆ ಅರ್ಥವಿಲ್ಲ. ಭಕ್ತನ ಮನವೇ ಲಿಂಗ, ತನ್ಮನದ ಜ್ಞಾನವೇ ಜಂಗಮ, ಜ್ಞಾನದ ಪರಿಪೂರ್ಣವೇ ಗುರುವಾಗಿದ್ದಾನೆ. ಗುರು ಸದ್ಭಕ್ತನೇ ಶೇಷ, ಜ್ಞಾನದ ಸಾರವೇ ಪಾದೋದಕ ಜ್ಞಾನದ ಪ್ರಕಾಶವಾಗಿದೆ. ಗುರು ನಿರಾಕಾರ ರೂಪಿ. ಆತನಲ್ಲಿ ಸ್ವಾರ್ಥವಿರುವುದಿಲ್ಲ. ಸಮಾಜ, ಶಿಷ್ಯನ ಒಳಿತಿಗಾಗಿ ಆತ ಹಂಬಲಿಸುತ್ತಾನೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ಗುರು, ಶರಣ, ಸಂತರ, ದಾರ್ಶನಿಕರ, ಮಹಾತ್ಮರ ಮಹತ್ವದ ಸಂದೇಶಗಳು ನಮಗೆ ದಾರಿದೀಪ. ಜ್ಞಾನದ ಪ್ರಕಾಶ ದೊರೆತಾಗ ನಮ್ಮ ಅಜ್ಞಾನದ ಅಂಧಕಾರ ದೂರವಾಗಲು ಸಾಧ್ಯ. ಬಸವಣ್ಣನವರು ಕಾಡಿಗೆ ಹೋಗಲಿಲ್ಲ, ತಪಸ್ಸು ಮಾಡಲಿಲ್ಲ. ತಮ್ಮಲ್ಲಿದ್ದ ಜ್ಞಾನದಿಂದ ಜನರ ಮನಕ್ಕೆ ಮುಟ್ಟಿಸಿ ಜನರನ್ನು ಸಾತ್ವಿಕರನ್ನಾಗಿ ಪರಿವರ್ತಿಸಿ ಸ್ವಾಸ್ಥ÷್ಯ ಸಮಾಜ ನಿರ್ಮಾಣಕ್ಕೆ ಅಣಿಯಾದರು ಎಂದರು.

ಯರನಾಳ ವಿರಕ್ತಮಠದ ಶ್ರೀ ಸಂಗನಬಸವ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಿವಶಂಕರ ಹಂಪಣ್ಣವರ, ಡಿ.ಬಿ. ಲಕಮನಹಳ್ಳಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net