ಶೃಂಗೇರಿ ಶಾರದೆಗೆ ಮಯೂರ ವಾಹನಾಲಂಕಾರ

web 1
Published on

ಶೃಂಗೇರಿ: ಶ್ರೀ ಶಾರದೆ ಅಶ್ವಯುಜ ಶುಕ್ಲ ಪಂಚಮಿಯ ಮಂಗಳವಾರ ಮಯೂರ ವಾಹನಾಲಂಕಾರದಲ್ಲಿ ಕಂಗೊಳಿಸಿದಳು.

ಉಭಯ ಶ್ರೀಗಳು ನರಸಿಂಹವನದ ಗುರುನಿವಾಸದಿಂದ ಶ್ರೀ ಶಾರದೆ ಸನ್ನಿಧಿಗೆ ಆಗಮಿಸುವ ಮೊದಲು ಶ್ರೀಮಠದ ಆವರಣದಲ್ಲಿರುವ ಶ್ರೀಸುಬ್ರಹ್ಮಣ್ಯ, ಶ್ರೀ ವಿದ್ಯಾಶಂಕರ, ಶ್ರೀ ವಾಗೀಶ್ವರಿ, ಶ್ರೀ ಜನಾರ್ದನಸ್ವಾಮಿ ಮುಂತಾದ ದೇವಾಲಯಗಳನ್ನು ದರ್ಶಿಸಿದರು. ನಂತರ ಉಭಯಶ್ರೀಗಳಿಂದ ಶ್ರೀಶಾರದೆ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿತು.

ಸರಳವಾಗಿ ನಡೆದ ದರ್ಬಾರ್ ಕಾರ್ಯಕ್ರಮದಲ್ಲಿ ಶ್ರೀ ಶಾರದೆಯ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಿ ಶ್ರೀಮಠದ ಒಳಪ್ರಾಂಗಣದಲ್ಲಿ ಮೂರು ಸುತ್ತು ರಥೋತ್ಸವ ನಡೆಸಲಾಯಿತು. ನಂತರ ಶ್ರೀ ಶಾರದೆಗೆ ಮಹಾ ಮಂಗಳಾರತಿ, ಒಂದು ಅಥವಾ ಎರಡು ಅಧ್ಯಾಯಗಳ ಸಪ್ತಶತಿ ಪಾರಾಯಣ, ನಾಲ್ಕು ವೇದಗಳ ಪಾರಾಯಣ, ಪಂಚಾಂಗಶ್ರವಣ, ಸರ್ವವಾದ್ಯಗಳ ಸೇವೆಗಳು ನೆರವೇರಿತು.

ಶ್ರೀ ಶಾರದೆ ಗುರು ಸ್ವರೂಪಿಣಿಯಾಗಿದ್ದು, ಈ ಪೀಠ ಅಲಂಕರಿಸುವ ಜಗದ್ಗುರುಗಳ ರೂಪದಲ್ಲಿ ಭಕ್ತರನ್ನು ಅನುಗ್ರಹಿಸುತ್ತಾಳೆ ಎಂಬ ಪ್ರತೀತಿ ಇದೆ. ಶ್ರೀ ಶಾರದೆ ಜ್ಞಾನ ಹಾಗೂ ಶಕ್ತಿ ಸ್ವರೂಪಿಣಿ, ಶ್ರೀ ಶಂಕರ ಭಗವತ್ಪಾದರು ಶ್ರೀ ಶಾರದೆಯನ್ನು ಶ್ರೀಚಕ್ರದ ಯಂತ್ರದ ಮೇಲೆ ಪ್ರತಿಷ್ಠಾಪಿಸಿದರು. ಶ್ರೀಮಾತೆಯನ್ನು ‘ಚಿದಾನಂದಲಹರೀ’ ಎಂದು ತಮ್ಮ ಸೌಂದರ್ಯ ಲಹರಿ ಸ್ತೋತ್ರದಲ್ಲಿ ಶ್ರೀಶಂಕರರು ಸ್ತುತಿಸಿದ್ದಾರೆ.

ಶ್ರೀ ಶಾರದಾ ಪರಮೇಶ್ವರಿಯನ್ನು ಇಲ್ಲಿನ ಪೀಠಾಧಿಪತಿಗಳು ಸರಸ್ವತಿ, ವಾಗ್ದೇವಿ, ಈಶ್ವರೀ, ಭವಾನಿ ಹೀಗೆ ಬೇರೆ ಬೇರೆ ಹೆಸರಿನಿಂದ ಕರೆದಿದ್ದಾರೆ. ಶಿವ-ಶಕ್ತಿಯಗಳೆರೆಡರ ಪ್ರತಿರೂಪವಾದ ಜಗನ್ಮಾತೆ ಮಹಾಲಕ್ಷ್ಮೀಯಾಗಿ, ಮಹಾ ಸರಸ್ವತೀಯಾಗಿ ಶೃಂಗೇರಿಯಲ್ಲಿ ವಿರಾಜಮಾನಳಾಗಿದ್ದಾಳೆ ಎಂಬುದು ಐತಿಹ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net