ಹುಬ್ಬಳ್ಳಿ: ಶ್ರೀಮಾತೆ ಶಾರದಾದೇವಿ ವಿಶ್ವಭಾವೈಕ್ಯ ಮಂದಿರದ 12ನೇ ವಾರ್ಷಿಕೋತ್ಸವ ಅಂಗವಾಗಿ ಜ. 25 ಹಾಗೂ 26ರಂದು ಇಲ್ಲಿಯ ಗೋಕುಲ ರಸ್ತೆ ಡಾರ್ಲಸ್ ಕಾಲನಿಯ ಶ್ರೀಮಾತಾ ಆಶ್ರಮದಲ್ಲಿ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಆಶ್ರಮ ಅಧ್ಯಕ್ಷೆ ಮಾತಾ ತೇಜೋಮಯಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದ್ದು, ಜ. 25ರಂದು ಬೆಳಗ್ಗೆ 8.30ಕ್ಕೆ ಚಂಡಿಕಾ ಹೋಮದಿಂದ ಶುಭಾರಂಭವಾಗಲಿವೆ. ಸಂಜೆ 6ಕ್ಕೆ ಧಾರವಾಡದ ಯಕ್ಷ ಗೆಳತಿಯರ ತಂಡದಿಂದ ಯಕ್ಷಗಾನ ಪ್ರಸಂಗ: ದಕ್ಷಯಜ್ಞ ಆಯೋಜಿಸಲಾಗಿದೆ ಎಂದರು.
ಜ. 26ರಂದು ಬೆಳಗ್ಗೆ 9ಕ್ಕೆ ಲಲಿತಸಹಸ್ರನಾಮದೊಂದಿಗೆ ಸಾಮೂಹಿಕ ಕುಂಕುಮಾರ್ಚನೆ ಹಾಗೂ ಮಹಿಳಾ ಸಮಾವೇಶ ನಡೆಯಲಿದೆ.
ಬೆಂಗಳೂರು ಭವತಾರಿಣಿ ಆಶ್ರಮದ ಅಧ್ಯಕ್ಷೆ ಮಾತಾಜಿ ವಿವೇಕಮಯಿ, ಹೊಸಪೇಟೆ ಹಂಸಾಂಬಾ ಆಶ್ರಮದ ಅಧ್ಯಕ್ಷೆ ಮಾತಾಜಿ ಪ್ರಬೋಧಮಯಿ ಸಾನ್ನಿಧ್ಯ ವಹಿಸುವರು.
ಧಾರವಾಡದ ನಂದು ಕೆಮಿಕಲ್ಸ್ ನಿರ್ದೇಶಕಿ ಉಷಾ ರಮಾನಂದ ಹೆಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕ್ಷೇತ್ರ ಯೋಜನಾಕಾರಿ ಲೀಲಾ ಮೂರ್ತಿ ಡಿ., ಇನ್ನರವೀಲ್ ಕ್ಲಬ್ ಅಧ್ಯಕ್ಷೆ ಉಜ್ವಲಾ ಪಾಟೀಲ, ಬಸವಶ್ರೀ ಪುರಸ್ಕೃತ ಉಮಾ ಅಕ್ಕೂರ, ಹಿರಿಯ ಧ್ಯಾನ ಬೋಧಕರಾದ ವಿಶಾಲಾಕ್ಷಿ ಆಕಳವಾಡಿ, ಕೆಎಂಸಿಆರ್ಐ ಸಹಾಯಕ ಪ್ರಾಧ್ಯಾಪಕಿ ಶಿಲ್ಪಾ ಮಾಕಣ್ಣವರ ಭಾಗವಹಿಸುವರು ಎಂದರು.
ಪ್ರಸ್ತುತ ಕಾಲಮಾನಕ್ಕೆ ಮಹಿಳೆಯರ ಆದರ್ಶ ಎಂಬ ವಿಷಯ ಕುರಿತು ಮಾತಾಜಿ ಪ್ರಬೋಧಮಯಿ, ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಭಾರತದ ಮಹಿಳೆ ಎಂಬ ವಿಷಯ ಕುರಿತು ಮಾತಾಜಿ ವಿವೇಕಮಯಿ ಉಪನ್ಯಾಸ ನೀಡಲಿದ್ದಾರೆ. ಧರ್ಮ ಜಾಗೃತಿ ಹಾಗೂ ಮಕ್ಕಳಿಗೆ ಸಂಸ್ಕಾರ ಕಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಮಾತಾಶ್ರೀ ಅಮೂಲ್ಯಮಯಿ, ಶ್ರೀಧರ ಕುಲಕರ್ಣಿ, ಡಿ.ಎಂ. ಮೆಹರವಾಡೆ, ಎಸ್.ಟಿ. ಅಕ್ಕಿ ಗೋಷ್ಠಿಯಲ್ಲಿದ್ದರು.