ಶಾರದಾವಿಲಾಸ ಫಾರ್ಮಸಿ ಕಾಲೇಜು ಪದವಿ ಪ್ರದಾನ ಸಮಾರಂಭ

Published on

ಮೈಸೂರು: ಯುವಜನರನ್ನು ಹೆಚ್ಚು ಹೊಂದಿರುವ ದೇಶ ನಮ್ಮದಾಗಿದ್ದು, ಯುವಜನರು ನವಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ್ ಎಸ್. ಆಲೂರ್ ಕರೆ ನೀಡಿದರು.

ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶತಮಾನೋತ್ಸವ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಶಾರದಾವಿಲಾಸ ಫಾರ್ಮಸಿ ಕಾಲೇಜಿನ ವಾರ್ಷಿಕ ದಿನಾಚರಣೆ ಹಾಗೂ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೇಶದ ಪ್ರತಿಯೊಬ್ಬರಿಗೂ ಆಹಾರ ಭದ್ರತೆ, ಸಾಮಾಜಿಕ ಭದ್ರತೆ, ಉತ್ತಮ ಶಿಕ್ಷಣ ಹಾಗೂ ಉತ್ತಮ ಆರೋಗ್ಯ ದೊರೆಯಬೇಕಾಗಿದೆ. ಈ ಅಂಶಗಳು ದೊರೆಯುವಂತೆ ಮಾಡಲು ಯುವಜನರು ಶ್ರಮಿಸಬೇಕು ಎಂದರು.

ಶಿಕ್ಷಣ ಎಂಬುದು ಅತ್ಯಂತ ಮಹತ್ವದ್ದು, ಇದು ಪ್ರತಿಯೊಬ್ಬರನ್ನು ಸಬಲೀಕರಣಗೊಳಿಸುತ್ತದೆ. ಜ್ಞಾನ ಇಲ್ಲದೆ ಕೈಗೊಳ್ಳುವ ಯಾವುದೇ ಕ್ರಿಯೆಯು ಅನುಪಯುಕ್ತವಾಗುತ್ತದೆ. ಜ್ಞಾನದೊಂದಿಗೆ ಮುನ್ನಡೆದರೆ ಅದು ನಮಗೆ ಸಮೃದ್ಧಿಯನ್ನು ತಂದುಕೊಡುತ್ತದೆ. ವಿದ್ಯಾರ್ಥಿಗಳು ನಕರಾತ್ಮಕ ಚಿಂತನೆಗಳನ್ನು ದೂರ ಮಾಡಿ ಸಕರಾತ್ಮಕ ಚಿಂತನೆಗಳನ್ನು ಮುನ್ನಡೆಯಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು, ಪ್ರತಿದಿನ ಹೊಸ ವಿಚಾರ ಹಾಗೂ ಹೊಸ ಸಾಧನೆ ಮಾಡುವ ಕಡೆಗೆ ಗಮನ ಹರಿಸಬೇಕು. ನೀವು ಒಂದು ಬಾರಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ತೋರಿ ಅಲ್ಲಿಗೆ ನಿಲ್ಲಬೇಡಿ, ಹೊಸ ಸಾಧನೆಯ ಕಡೆಗೆ ಗಮನ ಹರಿಸಿ. ಯಾವತ್ತೂ ನೀವು ಎಂದಿಗೂ ಆರಾಮದಾಯಕ ವಲಯದಲ್ಲಿ ಇರಲು ಬಯಬೇಡಿ, ಇದು ನಿಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುವುದಿಲ್ಲ ಎಂದರು.

ಶಾರದಾ ವಿಲಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಬಿ.ಎಂ. ಸುಬ್ರಾಯ, ಕಾರ್ಯದರ್ಶಿ ಆರ್. ದಿನೇಶ್, ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಟಿ.ಕೆ. ಉಮೇಶ್, ಪ್ರಾಂಶುಪಾಲ ಡಾ.ಹನುಮಂತಚಾರ್ ಜೋಶಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net