ಸಮಗ್ರ ವಿಕಸನಕ್ಕೆ ಸಂಗೀತ ಪೂರಕ

1
Published on

ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಮತ

ಬೆಂಗಳೂರು : ಭಾರತೀಯ ಸನಾತನ ಪರಂಪರೆಯು ಸಂಗೀತವನ್ನು ಶಕ್ತಿ ಸಂಜೀವಿನಿ ಎಂದೇ ಗೌರವಿಸಿದ್ದು, ಸಂಗೀತದ ಮಹತ್ವವನ್ನು ಮುಂದಿನ ಪೀಳಿಗೆಗೆ ದರ್ಶನ ಮಾಡಿಸುವ ಜವಾಬ್ದಾರಿ ಹಿರಿಯರ ಮೇಲಿದೆ ಎಂದು ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಹೇಳಿದರು.
ಶ್ರೀ ಶಾರದಾ ಸಂಗೀತ ಸಭಾದ 21ನೇ ವಾರ್ಷಿಕೋತ್ಸವ ಅಂಗವಾಗಿ ಹನುಮಂತನಗರದ ಸ್ವಾಮಿ ವಿವೇಕಾನಂದ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 3 ದಿನಗಳ ಸಂಗೀತ ಉತ್ಸವ ಮತ್ತು ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಮಾನವ ಕೋಟಿಯ ಸಮಗ್ರ ವಿಕಸನಕ್ಕೆ ಸಂಗೀತ ಪೂರಕವಾಗಿಯೇ ಇದೆ. ಹಾಗಾಗಿ ಅದು ಸಾರ್ವಕಾಲಿಕ ಮಾನ್ಯತೆ ಪಡೆದಿದೆ ಎಂದರು. ಸಂತ ತ್ಯಾಗರಾಜರು ‘ಸಂಗೀತವು ಮಾನವನಿಗೆ ಚತುರ್ವಿಧ ಪುರುಷಾರ್ಥ ಅನುಗ್ರಹಿಸುತ್ತದೆ ಎಂದರು. ವಿಜ್ಞಾನಿ ಸರ್ ಜಗದೀಶ ಚಂದ್ರ ಬೋಸರು ‘ಸಂಗೀತದಿಂದ ಸಸ್ಯಗಳು ಹುಲುಸಾಗಿ ಬೆಳೆಯುತ್ತವೆ’ ಎಂಬುದನ್ನು ಪ್ರತಿಪಾದಿಸಿದರು. ರಾಷ್ಟ್ರಪತಿಯೂ ಆಗಿದ್ದ ಖ್ಯಾತ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ‘ಮನೆ ಮನೆಯಲ್ಲಿ ಸಂಗೀತ ಪ್ರಸರಣವಾದರೆ ವಿಶ್ವವನ್ನು ಕಾಡುತ್ತಿರುವ ಭಯೋತ್ಪಾದನೆ ತಗ್ಗಿಸಬಹುದು’ ಎಂದು ಕರೆ ನೀಡಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ಸಂಗೀತ ವಿದ್ಯೆ ಮಾನವನನ್ನು ಮಾಧವನನ್ನಾಗಿಸುವ ಅಪಾರ ಶಕ್ತಿ, ಸಾಮರ್ಥ್ಯ ಹೊಂದಿದೆ ಎಂದು ಶ್ರೀ ವೀರೇಶಾನಂದರು ವಿವರಿಸಿದರು.
ಇಂದ್ರಿಯ ಅತೀತ ಶಕ್ತಿ ಇದೆ: ಪಾಶ್ಚಾತ್ಯ ರಾಷ್ಟ್ರಗಳಲ್ಲಿಕೈಗಾರಿಕಾ ಕ್ರಾಂತಿ ನಂತರ ಸಂಗೀತ ತನ್ನ ಅಧ್ಯಾತ್ಮಿಕ ಸ್ತರದಿಂದ ಕೆಳಗೆ ಜಾರಿತು. ಅದು ಇಂದ್ರಿಯ ಲೋಲುಪತೆಗೆ ಪ್ರಚೋದಿಸುವ ಮಾಧ್ಯಮವಾಗಿದ್ದು ವಿಷಾದ. ಇಂದ್ರಿಯ ಅತೀತವಾದ ಸ್ತರದಲ್ಲಿ ಮಾನವ ತನ್ನ ಸಮಗ್ರ ವಿಕಾಸ ಸಾಧಿಸಲು ಸಂಗೀತವನ್ನು ಸದ್ಬಳಕೆ ಮಾಡಿಕೊಳ್ಳಬೇಕಾದ ಜವಾಬ್ದಾರಿ ಇದೆ ಸ್ವಾಮೀಜಿ ಅವರು ಒತ್ತಿ ಹೇಳಿದರು. ಸಂಗೀತ ಸಭಾ ಅಧ್ಯಕ್ಷ ವಿದ್ವಾನ್ ಟಿ.ಎನ್. ಶಶಿಕುಮಾರ್, ಸಭಾ ಕಾರ್ಯದರ್ಶಿ ವಿದ್ವಾನ್ ಎಸ್. ಪ್ರಶಾಂತ್ ಇತರರು ಇದ್ದರು. ಶಾಸಕ ರವಿ ಸುಬ್ರಹ್ಮಣ್ಯ ಇತರರು ಇದ್ದರು.
ಸನ್ಮಾನ: ಇದೇ ಸಂದರ್ಭ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್, ಹಿರಿಯ ತಬಲಾ ಕಲಾವಿದ ಗುಂಡಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ನಂತರ ವಿದುಷಿ ರಮಾಮಣಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಪಕ್ಕವಾದದಲ್ಲಿ ವಿದುಷಿ ನಳಿನಾ ಮೋಹನ್ ಪಿಟೀಲು, ಅರ್ಜುನ ಕುಮಾರ್ ಮೃದಂಗ ಮತ್ತು ರಂಗನಾಥ ಚಕ್ರವರ್ತಿ ಘಟ ಸಹಕಾರ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net