

ಮಂಗಳೂರು: ಶಾರದಾ ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಯಾಗಿರುವ ಶಾರದ ಸಂಶೋಧನಾ ಕೇಂದ್ರ ಹಾಗೂ ಎಟಿಎಂಎ (ಆಳ್ವಾಸ್ ಟ್ರೆಡಿಷನಲ್ ಮೆಡಿಸಿನ್ ಆರ್ಕೈವ್) ಸಂಶೋಧನಾ ಕೇಂದ್ರ, ಮೂಡುಬಿದಿರೆ ಇವುಗಳ ನಡುವೆ ವಿಶೇಷ ಒಪ್ಪಂದಕ್ಕೆ ಗುರುವಾರ ಸಹಿ ಹಾಕಲಾಯಿತು.
ಶಾರದಾ ಸಮೂಹವನ್ನು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಪ್ರತಿನಿಧಿಸಿದರೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಡಾ. ವಿನಯ್ ಆಳ್ವ ಪ್ರತಿನಿಧಿಸಿದರು. ಶಾರದಾ ಸಮೂಹದ ನಿರ್ದೇಶಕ ಸಮೀರ್ ಪುರಾಣಿಕ್, ಎಟಿಎಂಎ ನಿರ್ದೇಶಕ ಡಾ.ಸುಬ್ರಹ್ಮಣ್ಯ ಪದ್ಯಾಣ, ಶಾರದಾ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ರವಿಗಣೇಶ್ ಮೊಗ್ರ, ಎಟಿಎಂಎ ಸಂಶೋಧನಾ ಕೇಂದ್ರದ ಮುಖ್ಯ ವೈಜ್ಞಾನಿಕ ಅಧಿಕಾರಿ ಡಾ.ಫರಹಾನ್ ಜಮೀರ್, ಶಾರದ ಆಯುರ್ವೇದ ವೈದ್ಯಕೀಯ ವಿದ್ಯಾಲಯದ ಉಪ ಪ್ರಾಂಶುಪಾಲ ಸಂದೀಪ್ ಬೇಕಲ್, ಶಾರದ ಸಂಶೋಧನಾ ಕೇಂದ್ರದ ವೈಜ್ಞಾನಿಕ ಅಧಿಕಾರಿ ಆರ್.ಕಾರ್ತಿಕ್ ರೈ ಹಾಗೂ ಶಾರದಾ ಸಂಶೋಧನಾ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು. ಸಹಿ ಹಾಕಿದ ಒಪ್ಪಂದದ ಪ್ರತಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಶಾರದಾ ಎಂಒಯು ಸಂಶೋಧನೆ, ಶಿಕ್ಷಣ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಪರಸ್ಪರ ಸಹಯೋಗ ಮತ್ತು ವಿನಿಮಯವನ್ನು ಸುಗಮಗೊಳಿಸುತ್ತದೆ. ಹೊಸ ಎಂಒಯು ಜಾರಿಗೆ ಬರುತ್ತಿದ್ದಂತೆ ಎರಡೂ ಸಂಸ್ಥೆಗಳು ಸಂಯೋಜಿತ ಸಂಶೋಧನಾ ಯೋಜನೆಗಳು ಮತ್ತು ಶಿಕ್ಷಕರ ತರಬೇತಿ ಮತ್ತು ಕೌಶಲ್ಯ ವರ್ಧನೆಯ ಚಟುವಟಿಕೆಗಳಲ್ಲಿ ಭಾಗವಹಿಸಬಹುದು.