ಶಾರದಾ ವಿದ್ಯಾಲಯದಲ್ಲಿ ಶಾರದಾ ಮಹೋತ್ಸವ

mng_4 oct sharada vidyalaya
ಶಾರದಾ ವಿದ್ಯಾಲಯದಲ್ಲಿ ಶಾರದಾ ಮಹೋತ್ಸವ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
Published on

ಮಂಗಳೂರು: ಶಾರದಾ ವಿದ್ಯಾಲಯದಲ್ಲಿ ಶಾರದಾ ಮಹೋತ್ಸವ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಕುಳಾಯಿ ಸಮೀಪದ ಶ್ರೀ ಚಿತ್ರಾಪುರ ಮಠದ ಪೂಜ್ಯ ಸ್ವಾಮೀಜಿ ಶ್ರೀ ವಿದ್ಯೇಂದ್ರತೀರ್ಥ ಶ್ರೀ ಪಾದಂಗಳವರು ಆಶೀರ್ವಚನ ನೀಡಿ, ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ಪ್ರವರ್ತಿಸುವುದರ ಜತೆಯಲ್ಲಿ ಸನಾತನ ಧರ್ಮದಲ್ಲಿ ಉಲ್ಲೇಖಿತ ಶಾಸ್ತ್ರಾಧಾರಯುಕ್ತವಾದ ವಿಚಾರಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಹಿತಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು. ಸ್ವಧರ್ಮೇ ನಿಧನಶ್ರೇಯಂ ಪರಧರ್ಮೇ ಭಯವಹ ಎನ್ನುವ ಗೀತೆಯ ವಿಚಾರದಂತೆ ತಮಗರಿವಿಲ್ಲದ ಅನ್ಯ ಧರ್ಮಾಚರಣೆಯಿಂದ ಹಾನಿ ಹೆಚ್ಚಾಗುತ್ತದೆ ಎಂದರು.

ಶಾರದಾ ಸಮೂಹ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಬಿ.ಪುರಾಣಿಕ್ ಮಾತನಾಡಿ, ಶಾರದಾ ವಿದ್ಯಾಲಯ ಸ್ಥಾಪನೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು.

ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಉಪಾಧ್ಯಕ್ಷ ಡಾ. ಸೀತಾರಾಮ ಭಟ್ ದಂಡತೀರ್ಥ, ಕಾರ್ಯದರ್ಶಿ ಪ್ರದೀಪ ಕುಮಾರ ಕಲ್ಕುರಾ, ವಿಶ್ವಸ್ಥರುಗಳಾದ ಸೀತಾರಾಮ ಆಚಾರ್ಯ, ಸುಧಾಕರ ರಾವ್ ಪೇಜಾವರ, ವಿದ್ಯಾ ಸಂಸ್ಥೆಗಳ ನಿರ್ದೇಶಕ ಸಮೀರ್ ಪುರಾಣಿಕ್, ಸುನಂದಾ ಪುರಾಣಿಕ್, ಎಸ್.ಕೆ.ಡಿ.ಬಿ. ಅಸೋಸಿಯೇಶನ್ ಅಧ್ಯಕ್ಷ ಪ್ರಭಾಕರ ರಾವ್ ಪೇಜಾವರ, ಕೋಶಾಧಿಕಾರಿ ರಾಮಕೃಷ್ಣ ರಾವ್, ಶಾರದಾ ವಿದ್ಯಾಲಯದ ಪ್ರಾಂಶುಪಾಲರುಗಳಾದ ಸುನೀತಾ ವಿ. ಮಡಿ, ದಯಾನಂದ ಕಟೀಲ್, ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ನಾಯಕ್ ಉಪಸ್ಥಿತರಿದ್ದರು.

ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲ್ ಸ್ವಾಗತಿಸಿದರು. ಅಧ್ಯಾಪಿಕೆ ಅಮಿತಾ ಪದ್ಮನಾಭ ವಂದಿಸಿದರು. ಶಿಕ್ಷಕ ಸತ್ಯನಾರಾಯಣ ಬಿ. ಕಾರ್ಯಕ್ರಮ ನಿರೂಪಿಸಿದರು.

--------------------

ಶಾರದೋತ್ಸವ ಆಚರಣೆ

ಶಾರದೋತ್ಸವ ಆಚರಣೆಯ ಅಂಗವಾಗಿ ಮೊದಲಿಗೆ ವಿದ್ಯಾ ಸಂಸ್ಥೆಯ ಧ್ಯಾನಮಂದಿರ ಸಭಾಂಗಣದಲ್ಲಿ ಶಾರದಾ ಮಾತೆಯ ಪ್ರತಿಮೆಯ ಮುಂದೆ ವಿದ್ಯಾರ್ಥಿ ಬಳಗ ಹಾಗೂ ಅಧ್ಯಾಪಕ ವೃಂದದಿಂದ ಭಜನೆ, ಮಹಾಪೂಜೆ, ಮಂಗಳಾರತಿ ನೆರವೇರಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾಲಯದ ನೃತ್ಯ ಶಿಕ್ಷಿಕಿ ಶುಭ ಶೇಷಾದ್ರಿ ಅವರ ನಿರ್ದೇಶನದಲ್ಲಿ ವಿದ್ಯಾಲಯದ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಪ್ರದರ್ಶನದಂಗವಾಗಿ ನೃತ್ಯ ವೈವಿಧ್ಯ ಪ್ರದರ್ಶನವಿತ್ತು ಎಲ್ಲರನ್ನು ರಂಜಿಸಿದರು. ವಂದೇ ಮಾತರಂ ಗಾಯನದ ಬಳಿಕ ಎಲ್ಲರಿಗೂ ಪ್ರಸಾದ ಹಾಗೂ ಪಾನಕ ವಿತರಣೆಗೈಯ್ಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net