

ಮಂಗಳೂರು : ತುಳುನಾಡು ಎಜ್ಯುಕೇಶನ್ ಟ್ರಸ್ಟ್ ನೇತೃತ್ವದ ಸಮೂಹ ಸಂಸ್ಥೆಗಳಲ್ಲಿ ಒಂದಾದ ತಲಪಾಡಿಯ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನೂತನ ಮೂರು ಚಿಕಿತ್ಸಾ ವಿಭಾಗಳ ಉದ್ಘಾಟನೆ ಅ.24ರಂದು ನೆರವೇರಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಬಿ ಪುರಾಣಿಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಶಾರದಾ ಆಸ್ಪತ್ರೆಯ ಸೇವಾ ಸೌಲಭ್ಯಗಳನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಗಮನ, ಅಂಕುರ ಹಾಗೂ ನಿರ್ವಿಷ ಹೆಸರಿ ಮೂರು ವಿಭಾಗಗಳನ್ನು ಆರಂಭಿಸಲಾಗುವುದು. ನಿಕಟಪೂರ್ವ ಲಯನ್ಸ್ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿ.ಸೋಜ, ಉದ್ಯಮಿ ರಾಹುಲ್ ಜೈನ್ ಹಾಗೂ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೆಪುಣಿ ಈ ವಿಭಾಗಳನ್ನು ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.
*ನೂತನ ವಿಭಾಗಗಳ ವಿಶೇಷತೆ :
ಬೆನ್ನು ಹುರಿ ಹಾಗೂ ಸಂಧು ಆರೋಗ್ಯ ವಿಭಾಗವಾದ ‘ಗಮನ’ದಲ್ಲಿ ಬೆನ್ನು ಮೂಳೆ ಸಮಸ್ಯೆ, ಮೂಳೆ ಸವೆತ, ಸ್ಲಿಪ್ ಡಿಸ್ಕ್ ಗಂಟುನೋವು, ಸ್ನಾಯುಗಳ ಸೆಳೆತ, ಸಯಾಟಿಕದಂತಹ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆಯ ಲಭ್ಯವಾಗಲಿದೆ. ಕ್ಯಾನ್ಸರ್ ಪೂರಕ ಚಿಕಿತ್ಸಾ
ವಿಭಾಗವಾದ ‘ಅಂಕುರ’ದಲ್ಲಿ ಕ್ಯಾನ್ಸರ್‌ಗೆ ಪೂರಕ ಚಿಕಿತ್ಸೆ ಹಾಗೂ ಬೇರೆ ಚಿಕಿತ್ಸೆಯ ಅಡ್ಡ ಪರಿಣಾಮಗಳಿಂದ ಬಳಲುತ್ತಿರುವವರಿಗೆ ಸೂಕ್ತ ಪೂರಕ ಔಷಧ ಮತ್ತು ಆಹಾರ ಪದ್ಧತಿಯ ಸಲಹೆ ನೀಡಲಾಗುವುದು. ವಿಷ ಚಿಕಿತ್ಸಾ ವಿಭಾಗವಾದ ‘ನಿರ್ವಿಷ’ದಲ್ಲಿ ಚರ್ಮದ ಅಲರ್ಜಿ, ತುರಿಕೆ, ಜೇಡ, ಜೇನು ನೊಣ ಇತ್ಯಾದಿ ಕೀಟಗಳ ಕಡಿತದಿಂದ ಉಂಟಾಗುವ ವಿಷಕ್ಕೆ ಹಾಗೂ ವಿಷ ಪೂರಿತ ಗಾಳಿ, ನೀರು ಹಾಗೂ ಆಹಾರ ಸೇವನೆಯಿಂದ ಉಂಟಾಗುವ ತೊಂದರೆಗಳಿಗೆ ಸೂಕ್ತ ಚಿಕಿತ್ಸೆಯು ಲಭ್ಯವಿದೆ ಎಂದು ಡಾ.ಪುರಾಣಿಕ್ ವಿವರ ನೀಡಿದರು.
ಉಚಿತ ತಪಾಸಣಾ ಶಿಬಿರ
ನೂತನ ವಿಭಾಗ ಉದ್ಘಾಟನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅ.24ರಿಂದ 30ರವರೆಗೆ ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಬೆನ್ನುಹುರಿ ಹಾಗೂ ಸಂಧು ಆರೋಗ್ಯ ವಿಭಾಗ ಮತ್ತು ನಿರ್ವಿಷ ಚಿಕಿತ್ಸಾ ವಿಭಾಗದ ವತಿಯಿಂದ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ
ನಡೆಯಲಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಡಾ.ಸಂದೀಪ್ ಬೇಕಲ್ ತಿಳಿಸಿದರು. ಉಚಿತ ಮೂಳೆ ಸಾಂದ್ರತೆ ಪರೀಕ್ಷೆಯನ್ನು ಅ. 26ರಂದು ಹಮ್ಮಿಕೊಳ್ಳಲಾಗುವುದು. ಅ.29ರಂದು ವಿಶೇಷ ಆಹಾರ ಮೇಳ ಮತ್ತು ಸ್ವಾಸ್ಥ್ಯ ರುಚಿ ಎಂಬ ಆರೋಗ್ಯಕರ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ 8971153232 ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ತುಳುನಾಡು ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಎಸ್.ಪ್ರದೀಪ ಕುಮಾರ ಕಲ್ಕೂರ, ಪ್ರೊ.ಶ್ಯಾಮ್ ಪ್ರಸಾದ್, ಹರ್ಷಿತ್, ಉಪಸ್ಥಿತರಿದ್ದರು.