ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಿ

DHARMA
ಹೂವಿನಹಡಗಲಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಚೇರಿಯ ಉದ್ಘಾಟನೆಯನ್ನು ಶಾಸಕ ಕೃಷ್ಣನಾಯ್ಕ ಗುರುವಾರ ಉದ್ಘಾಟಿಸಿದರು. ಕೊಪ್ಪಳ ಪ್ರಾದೇಶಿಕ ಕಚೇರಿ ನಿರ್ದೇಶಕ ಗಣೇಶ.ಬಿ, ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ, ಮಹಾವೀರ ಅಲ್ಪ ಸಂಖ್ಯಾತರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಜೈನ್ ಹಾಗೂ ಇತರರಿದ್ದರು.
Published on

ಹೂವಿನಹಡಗಲಿ: ಮಹಿಳೆಯರು ಸಬಲೀಕರಣ ಸಾಧಿಸುವ ಸಾಮರ್ಥ್ಯ ಪಡೆಯಲು ಸಂಘ-ಸಂಸ್ಥೆಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟಿನ ಎರಡನೇ ಯೋಜನಾ ಕಚೇರಿಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಮಾಡಬೇಕಾದ ಕೆಲಸವನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾಡುತ್ತಿದ್ದು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಮಾಜದ ಎಲ್ಲ ರಂಗಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕವಾಗಿ ಹೆಚ್ಚಿನ ಅರಿವು ಪಡೆಯಬಹುದು.

ಗ್ರಾಮೀಣ ಭಾಗದ ಮಹಿಳೆಯರಲ್ಲಿ ಸಂಘಟನೆ, ಸಹಕಾರ ಹಾಗೂ ನಾಯಕತ್ವ ಗುಣಗಳನ್ನು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ. ಮಹಿಳೆಯರು ಆರ್ಥಿಕ ಸಾಕ್ಷರತೆ ಜತೆಗೆ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಬೇಕು. ಪ್ರಸ್ತುತ ತಾಲೂಕು ಬರಪೀಡಿತವಾಗಿದ್ದು ಮಹಿಳೆಯರು ಮನೆ ನಿರ್ವಹಣೆ ಮಾಡಲು ಕಷ್ಟವಾಗುತ್ತಿರುವ ಸಂದರ್ಭದಲ್ಲಿ ಈ ಸಂಸ್ಥೆ ನೆರವಾಗುತ್ತಿದೆ ಎಂದರು.

ಕೊಪ್ಪಳದ ಪ್ರಾದೇಶಿಕ ಕಚೇರಿ ನಿರ್ದೇಶಕ ಗಣೇಶ್.ಬಿ. ಮಾತನಾಡಿ, ಹೂವಿನಹಡಗಲಿಯ ಕಚೇರಿ ವ್ಯಾಪ್ತಿಯಲ್ಲಿ ಮೂರು ಕೋಟಿಗೂ ಹೆಚ್ಚು ಆರ್ಥಿಕ ವಹಿವಾಟು ನಡೆದ ಕಾರಣ ಈ ಭಾಗದಲ್ಲಿ ಮತ್ತೊಂದು ಕಚೇರಿಯನ್ನು ಪ್ರಾರಂಭಿಸಲಾಗಿದೆ. ಸಂಘದ ಯೋಜನೆಗಳು ಸದಸ್ಯರ ಮನೆ ಬಾಗಿಲಿಗೆ ತಲುಪಿಸುವ ಕೆಲವನ್ನು ಮಾಡುತ್ತಿದೆ. ಸಂಸ್ಥೆಯಲ್ಲಿ ಜಾತಿ, ರಾಜಕೀಯ ರಹಿತವಾದ ಯೋಜನೆಗಳಿದ್ದು ಮಹಿಳೆಯರು ಆ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಹೆಣ್ಣಿಗೆ ಹೆಣ್ಣು ಶತ್ರುವಲ್ಲ ಹೆಣ್ಣಿಗೆ ಹೆಣ್ಣು ಶಕ್ತಿ ಎಂಬ ಪರಿಕಲ್ಪನೆಯನ್ನು ಸಂಸ್ಥೆ ಹೊಂದಿದೆ ಎಂದರು.

ಧರ್ಮಸ್ಥಳ ಸಂಘದ ಯೋಜನಾಧಿಕಾರಿಗಳಾದ ತಿಲಕ್ ರಾಜ್, ರವೀಂದ್ರ, ಪುರಸಭೆ ಮಾಜಿ ಸದಸ್ಯರಾದ ಸಂತೋಷ್ ಜೈನ್, ಕೋಡಿಹಳ್ಳಿ ಕೊಟ್ರೇಶ್, ಪುರಸಭೆ ಮಾಜಿ ಅಧ್ಯಕ್ಷ ಜ್ಯೋತಿಮಲ್ಲಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net