

ಕುಮಟಾ: ಪಟ್ಟಣದ ಗ್ರಾಮದೇವತೆ ಭೂಮಿದೇವತೆ ಅಮ್ಮನವರು ಎಂದೇ ಪ್ರತೀತವಾದ ದೇವರಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಿಯ ವಾರ್ಷಿಕ ಬಂಡಿಹಬ್ಬ ಕಾರ್ಯಕ್ರಮಗಳನ್ನು ಪಾರಂಪರಿಕ ವಿಶೇಷತೆಯೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ದೇವರಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ಮಂದಿರದಿಂದ ಹೊರಟ ಸಾಲಂಕೃತ ಕಳಸದ ಮೆರವಣಿಗೆಯು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮೆರವಣಿಗೆ ವೇಳೆ ಮರಕಾಲು ನಡಿಗೆ, ದೇವಿಯ ಪೌರಾಣಿಕ ಕಥಾನಕದ ಸ್ತಬ್ಧ ಚಿತ್ರಗಳು ಗಮನ ಸೆಳೆದವು.
ಬಳಿಕ ಕಲಶ ಮೆರವಣಿಗೆಯು ರಥಬೀದಿಯ ಶ್ರೀ ಶಾಂತೇರಿ ಕಾಮಾಕ್ಷಿ ದೇವಸ್ಥಾನಕ್ಕೆ ಆಗಮಿಸಿತು. ಅಲ್ಲಿ ಪೂಜೆ ಸ್ವೀಕರಿಸಿ ಬಸ್ತಿಪೇಟೆ ಕ್ರಾಸ್ ಹತ್ತಿರ ದೇವಿ ಹಾಗೂ ಪರಿವಾರದ ಕಳಸದ ಗಿಂಡಿಯೊಳಗೆ ಭಕ್ತಾದಿಗಳು ಕಾಣಿಕೆ ಸಮರ್ಪಿಸಿದರು.
ಅಲ್ಲಿಂದ ಮತ್ತೆ ದೇವಸ್ಥಾನಕ್ಕೆ ಮರಳಿದ ಕಲಶ ಮೆರವಣಿಗೆಯು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಕೆಂಡ ಹಾಯುವ ಸಂಪ್ರದಾಯ ಮುಗಿಸುವ ಮೂಲಕ ಬಂಡಿಹಬ್ಬ ಸಂಪನ್ನಗೊಂಡಿತು.