1943ರಲ್ಲಿ ಅಂಕೋಲಾ ಬೇಲಿಕೇರಿಯಲ್ಲಿ ಜನಿಸಿದ ಶಾಂತಿ ನಾಯಕ ಬಿ.ಎಡ್, ಎಂ.ಎ. ಅಧ್ಯಯನ ಮಾಡಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಕರ್ಕಿಯ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆ ಆರಂಭಿಸಿ ಮುಖ್ಯಾಧ್ಯಾಪಕಿಯಾಗಿ ನಿವೃತ್ತಿ ಹೊಂದಿದ್ದಾರೆ. 1960ರಿಂದ ಈವರೆಗೆ 60 ವರ್ಷಗಳಿಂದ ತಮ್ಮ ಬಿಡುವಿನಲ್ಲಿ ಜಾನಪದ ಕ್ಷೇತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 2001ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯೆಯಾಗಿ, 2003ರಿಂದ ಜಾನಪದ ಪರಿಷತ್ತಿನ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದಾರೆ. 1982ರಲ್ಲಿ ಪತಿ ಡಾ. ಎನ್.ಆರ್.ನಾಯಕ ಜೊತೆ ಜಾನಪದ ಪ್ರಕಾಶನ ಸಂಸ್ಥೆ ಸ್ಥಾಪಿಸಿ, ಜನಪದ ಸಸ್ಯ, ಜನಪದ ಔಷದ ಸಸ್ಯ, ಜಾನಪದ ಆಹಾರ ಮೊದಲಾದ ವಿಷಯಗಳಲ್ಲಿ 50 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಗೊಟಗೋಡಿಯ ಜನಪದ ವಿಶ್ವವಿದ್ಯಾಲಯ ಸ್ಥಾಪಕ ಸದಸ್ಯರಾಗಿದ್ದಾರೆ.