

ಕುಶಾಲನಗರ: ಸೂರ್ಯಗ್ರಹಣದ ಸಮಯದಲ್ಲಿ ಇಲ್ಲಿನ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಗ್ರಹಣ ದೋಷವಿರುವ ನಕ್ಷತ್ರ ಮತ್ತು ರಾಶಿಗಳಿಗೆ ಭಾನುವಾರ ಉಪರಾಗ ಶಾಂತಿ ಹೋಮ ಮತ್ತು ವಿಶೇಷ ಪೂಜೆ ಮಾಡಲಾಯಿತು.
ಬೆಳಗ್ಗೆ 9 ಗಂಟೆಗೆ ಸಂಕಲ್ಪದೊಂದಿಗೆ ಆರಂಭವಾದ ಪೂಜಾ ಕಾರ್ಯಕ್ರಮಗಳು ಗ್ರಹಣ ಮೋಕ್ಷ ಕಾಲದವರೆಗೂ ದೇವಸ್ಥಾನದ ಅರ್ಚಕ ಪ್ರಮೋದ್ ಭಟ್ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಆರ್ಯವೈಶ್ಯ ಸಮಾಜದವರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ವಿ.ಪಿ.ನಾಗೇಶ್ ಮಾತನಾಡಿ, ಲೋಕ ಕಲ್ಯಾಣರ್ಥ ವಿಶೇಷ ಪೂಜೆ ಮಾಡಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಧರಿಸಿ ಬರುವಂತೆ ತಿಳಿಸಲಾಗಿತ್ತು. ಭಕ್ತರು ಪಾಲಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಬಿ.ಎಲ್.ಅಶೋಕ್, ಉಪಾಧ್ಯಕ್ಷ ಬಿ.ಎಲ್.ಉದಯಕುಮಾರ್, ನಿರ್ದೇಶಕರಾದ ಎಂ.ಪಿ.ಸತ್ಯನಾರಾಯಣ, ಬಿ.ಆರ್.ನಟರಾಜ್, ಎ.ಎಸ್.ಸುರೇಶ್ ಬಾಬು, ಎಸ್.ಎಂ.ಸತೀಶ್, ವಿ.ಪಿ.ಮುರಳಿ ಮುಂತಾದವರು ಉಪಸ್ಥಿತರಿದ್ದರು.