ಡ್ಯಾಂ ಕಾಮಗಾರಿಗೆ ವೇಗ: ಶಾಂತಿಮೊಗರಿನಲ್ಲಿ 7.5 ಕೋಟಿ ರೂ. ವೆಚ್ಚದ ಯೋಜನೆ

kdb web
Published on

ಪ್ರವೀಣ್‌ರಾಜ್ ಕಡಬ

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಲುವಾಗಿ ಶಾಂತಿಮೊಗರು ಬಳಿ ಕುಮಾರಧಾರಾ ನದಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿಂಡಿ ಅಣೆಕಟ್ಟು ಕಾಮಗಾರಿ ಭರದಿಂದ ಸಾಗುತ್ತಿದ್ದು, ಅಡಕೆ ಬೆಳೆಗಾರರ ಮುಖದಲ್ಲಿ ಹೊಸ ಚೈತನ್ಯ ಮೂಡಿದೆ.

ಕಡಬ ತಾಲೂಕಿನ ಕುದ್ಮಾರು, ಸವಣೂರು, ಬೆಳಂದೂರು, ಕಾಣಿಯೂರು, ಪುಣ್ಚಪ್ಪಾಡಿ, ಆಲಂಕಾರು, ಪೆರಾಬೆ, ಕುಂತೂರು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶ ಹೊಂದಲಾಗಿದೆ. ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮುಖಾಂತರ ಯೋಜನೆಗೆ 7.5 ಕೋಟಿ ರೂ. ಅನುದಾನ ಒದಗಿಸಿದ್ದು, ಪಶ್ಚಿಮ ವಾಹಿನಿ ಯೋಜನೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಈ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ನದಿ ಪಾತ್ರದ ಎರಡು ಭಾಗದ ಮೂರು ಕಿ.ಮೀ. ಸುತ್ತಳತೆಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಎರಡು ವರ್ಷಗಳ ಹಿಂದೆ ಆರಂಭಗೊಂಡ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಂಡಿದೆ. 2020ರೊಳಗೆ ಕಾಮಗಾರಿ ಮುಗಿಸಲು ಅವಧಿ ನಿಗದಿಯಾಗಿತ್ತು. ಆದರೆ ನದಿ ನೀರಿನ ಹರಿವಿನ ಪ್ರಮಾಣ ಕಡಿಮೆ ಆಗದ ಕಾರಣ ಕಾಮಗಾರಿ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಸಾಗಿರಲಿಲ್ಲ.

18.56 ಎಂಸಿಎಫ್‌ಟಿ ನೀರು ಶೇಖರಣೆ: ಕುಡಿಯುವ ನೀರಿನ ಭವಣೆ ನೀಗಿಸಬೇಕೆನ್ನುವ ಉದ್ದೇಶದಿಂದ ಈ ಕಿಂಡಿ ಅಣೆಕಟ್ಟು ಯೋಜನೆಗೆ 7.5 ಕೋಟಿ ರೂ. ಮಂಜೂರುಗೊಂಡಿದೆ. ನದಿಯ ತಳಮಟ್ಟದಿಂದ ನಾಲ್ಕು ಮೀಟರ್ ಎತ್ತರದಲ್ಲಿ ನಿರ್ಮಾಣವಾಗುತ್ತಿರುವ ಈ ಅಣೆಕಟ್ಟು 221 ಮೀಟರ್ ಉದ್ದ ಹಾಗೂ ಮೂರು ಮೀಟರ್ ಅಗಲವಿದೆ. 56 ಕಿಂಡಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದರಲ್ಲಿ ಸುಮಾರು 18.56 ಎಂಸಿಎಫ್‌ಟಿ ನೀರು ಶೇಖರಣೆಯಾಗಲಿದೆ. ಡಿಸೆಂಬರ್ ಆರಂಭದಿಂದ ನದಿಯ ನೀರಿನ ಮಟ್ಟವನ್ನು ನೋಡಿಕೊಂಡು ಹಲಗೆಗಳನ್ನು ಕಿಂಡಿಗಳಿಗೆ ಜೋಡಣೆ ಮಾಡಲಾಗುತ್ತದೆ. ಯಥಾಪ್ರಕಾರ ಮಳೆಗಾಲ ಪ್ರಾರಂಭವಾಗಿ ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾಗುತ್ತಿದ್ದಂತೆ ಹಲಗೆಗಳನ್ನು ತೆಗೆದು ಬಿಡಲಾಗುತ್ತದೆ.

ಬಹು ಬೇಡಿಕೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಪೂರ್ಣಗೊಂಡು ಲೋಕಾರ್ಪಣೆಯಾಗಲಿದೆ. ಯೋಜನೆಯಿಂದ ಸುಮಾರು 4 ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಎಸ್.ಅಂಗಾರ, ಸಚಿವ ಹಲವು ವರ್ಷದಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದ ನಮ್ಮ ಊರಿಗೆ ಸಚಿವರು ನೀಡಿರುವ ಕೊಡುಗೆ ಶ್ಲಾಘನೀಯ. ಡ್ಯಾಂನ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿನಮಟ್ಟ ಕೂಡ ಜಾಸ್ತಿಯಾಗಿ ಕೃಷಿ ಚಟುವಟಿಕೆಗೆ ಸಹಕಾರಿಯಾಗಲಿದೆ. ಹಾಗೇನೇ ಡ್ಯಾಂನ ಕೆಲಸ ಅತಿವೇಗವಾಗಿ ನಡೆಯುತ್ತಿದ್ದು, ಆದಷ್ಟು ಬೇಗ ಅದರ ಕೆಲಸ ಮುಗಿದಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಲಿದೆ. ಲೋಕೇಶ್ ಬಿ.ಎನ್, ಬರೆಪ್ಪಾಡಿ, ಸಾಮಾಜಿಕ ಕಾರ್ಯಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net