

ಪುತ್ತೂರು: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಇಲಾಖೆಯ ಜವಾಬ್ದಾರಿಯಷ್ಟೇ ನಾಗರಿಕರದ್ದೂ ಹೊಣೆಗಾರಿಕೆಯಿದೆ. ಜನರು ಸಾಮಾಜಿಕ ಮಾಧ್ಯಮವನ್ನು ಬಳಸುವ ಸಂದರ್ಭ ಎಚ್ಚರಿಕೆ ವಹಿಸಬೇಕು. ಕಾನೂನಿಗೆ ಪ್ರತಿಯೊಬ್ಬರೂ ತಲೆಬಾಗಬೇಕು ಎಂದು ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಹೇಳಿದರು.
ಪುತ್ತೂರು ಪುರಭವನದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಶಾಂತಿಸಭೆಯಲ್ಲಿ ಮಾತನಾಡಿದರು.
ಪೊಲೀಸ್ ಉಪಾಧಿಕ್ಷಕ ಅರುಣ್ ನಾಗೇಗೌಡ ಮಾತನಾಡಿ, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಪ್ರತಿಯೊಬ್ಬರ ವರ್ತನೆ ಇರಬೇಕು. ಹಬ್ಬದ ಆಚರಣೆಯನ್ನು ಪರಸ್ಪರ ಸೌಹಾರ್ದದಿಂದ ನಡೆಸಬೇಕು ಎಂದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಬಿಜೆಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ, ಮುರಳೀಧರ ರೈ ಮಠಂತಬೆಟ್ಟು, ಎಸ್‌ಡಿಪಿಐ ಮುಖಂಡ ಅಬ್ದುಲ್ ಸಿದ್ಧಿಕ್ ಕೆ.ಎ., ಮೌರೀಸ್ ಮಸ್ಕರೇನ್ಹಸ್, ವರ್ತಕ ಎಲ್.ಟಿ.ಅಬ್ದುಲ್ ರಜಾಕ್, ರಫೀಕ್ ಸವಣೂರು, ಅಶ್ರಫ್ ಕಲ್ಲೇಗ ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ, ಸುಳ್ಯ ವೃತ್ತನಿರೀಕ್ಷಕ ತಿಮ್ಮಪ್ಪ, ಮಹಿಳಾ ಠಾಣಾ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಉಪಸ್ಥಿತರಿದ್ದರು. ಪುತ್ತೂರು, ಸುಳ್ಯ, ಕಡಬ, ಬೆಳ್ಳಾರೆ ಸಹಿತ ವಿವಿಧ ಠಾಣಾ ಪೊಲೀಸರು ಉಪಸ್ಥಿತರಿದ್ದರು.
ಧರ್ಮ ಹೆಸರಿನಲ್ಲಿ ಪರಸ್ಪರ ಟೀಕೆ, ದೂಷಣೆ, ಸಾಮಾಜಿಕ ಜಾಲತಾಣದಲ್ಲಿ ಉತ್ತರ-ಪ್ರತ್ಯುತ್ತರ ಮಾಡುವ ಬದಲು ನಾವೆಲ್ಲರೂ ಒಂದಾಗಿ ಜೀವಿಸಬೇಕು. ಹಬ್ಬ ಇಡೀ ಮಾನವ ಕುಲಕ್ಕೆ ಅನ್ನುವ ಯೋಚನೆ ನಮ್ಮಲ್ಲಿ ಇರಬೇಕು. ನಾವು ಭಾರತೀಯರು ಎಂಬುದು ಮುಖ್ಯವಾಗಿದ್ದು, ಜಾತಿ, ಧರ್ಮ ಅನ್ನುವುದು ಮುಂದೆ ಬರಬಾರದು.
| ಈಶ್ವರ ಭಟ್ ಪಂಜಿಗುಡ್ಡೆ, ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
ಹಿಂದುಗಳಿಗೆ ಗೋವು ದೇವರ ಸಮಾನಾಗಿದ್ದು, ಅವುಗಳ ಹತ್ಯೆ ಆಗದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು. ಗೋವುಗಳಿಗೆ ಸಮಸ್ಯೆಯಾಗದಿದ್ದಾಗ ಯಾವುದೇ ಘಟನೆಗಳಾಗುವುದಿಲ್ಲ. ಅಪರಾಧ ಕೃತ್ಯಗಳಿಗೆ ಡ್ರಗ್ಸ್, ಸಾಮಾಜಿಕ ಜಾಲತಾಣ ಕಾರಣವಾಗುತ್ತಿದ್ದು, ಪೊಲೀಸರು ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.
| ಮುರಳೀಕೃಷ್ಣ ಹಸಂತಡ್ಕ ಬಿಜೆಪಿ ಮುಖಂಡ
ಜನರಿಲ್ಲದೆ ಮೀಟಿಂಗ್
ಪುತ್ತೂರು ಪೊಲೀಸ್ ಉಪವಿಭಾಗಕ್ಕೆ ಸೇರಿದ ಪುತ್ತೂರು, ಸುಳ್ಯ, ಕಡಬ ತಾಲೂಕಿನ ಸಭೆಯನ್ನು ಪುರಭವನದಲ್ಲಿ ಆಯೋಜಿಸಲಾಗಿತ್ತು. ಆದರೆ ಸಭೆಯಲ್ಲಿ ಠಾಣೆಯ ಸಭೆಗೆ ಸೇರುವಷ್ಟೂ ಜನವಿರದೆ, ಬೆರಳೆಣಿಕೆಯಲ್ಲಿದ್ದರು.