ಗೋವು ಅಕ್ರಮ ಸಾಗಾಟಕ್ಕೆ ಅವಕಾಶ ಕೊಡಬೇಡಿ - ಯುಗಾದಿ, ರಮಜಾನ್ ಶಾಂತಿ ಸಭೆಯಲ್ಲಿ ಸಾರ್ವಜನಿಕರ ಆಗ್ರಹ

PTR_27 MAR_4
Published on

ಪುತ್ತೂರು: ಮಾದಕ ವಸ್ತುಗಳ ವಿತರಕರನ್ನು ಹಿಡಿದರೆ ಅಥವಾ ಅವರ ಮಾಹಿತಿ ನೀಡಿದರೆ, ಪೊಲೀಸರು ನಮಗೆ ಪರಿಚಯ ಎಂದು ಹೇಳಲಾಗುತ್ತಿದೆ. ಪೊಲೀಸ್ ನೈತಿಕಗಿರಿ ನಡೆಯುತ್ತಿದೆ, ಪೊಲೀಸರ ಮೇಲೆಯೇ ದಾಳಿ ನಡೆದರೂ ಪ್ರಕರಣ ದಾಖಲಾಗುತ್ತಿಲ್ಲ. ಸೈಬರ್ ಕ್ರೈಂ ಹೆಚ್ಚಾಗುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ. ಹಬ್ಬಗಳ ಹಿನ್ನಲೆಯಲ್ಲಿ ಗೋವು ಅಕ್ರಮ ಸಾಗಾಟಕ್ಕೆ ಅವಕಾಶ ನೀಡಬಾರದು ಎಂದು ಯುಗಾದಿ ಹಾಗೂ ರಮಜಾನ್ ಹಬ್ಬದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಸಾರ್ವಜನಿಕರು ಆಗ್ರಹಿಸಿದರು.

ಮಾದಕ ವಸ್ತುಗಳ ವ್ಯವಹಾರ ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚಾಗಿದೆ. ಇದಕ್ಕಾಗಿ ಕೆಲವು ಗ್ರೂಪ್‌ಗಳನ್ನು ಮಾಡಲಾಗಿದೆ. ಮಾದಕ ವಸ್ತುಗಳ ಮಾರಾಟದ ವಿಚಾರ ಮಾಹಿತಿ ನೀಡಿದ ವ್ಯಕ್ತಿ ಹೆಸರು ಬಹಿರಂಗವಾಗುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ಹಿಡಿದರೆ ನಮಗೆ ಪೊಲೀಸರ ಪರಿಚಯವಿದೆ, ನೀವು ಅವರಿಗೆ ಒಪ್ಪಿಸಿದರೂ ಏನೂ ಆಗಲ್ಲ ಎಂಬ ಮಾತು ಕೇಳಿ ಬರುತ್ತಿದೆ ಎಂದು ಆರೋಪಿಸಿದರು.

ಪೊಲೀಸರ ಮೇಲೆ ಕೈ ಹಾಕುವುದು, ದೂಡುವುದು, ಸವಾರಿ ಮಾಡುವುದನ್ನು ಉಳಿದವರೂ ಗಮನಿಸಿಕೊಂಡಿದ್ದಾರೆ. ಅಂತಹ ಕೃತ್ಯ ಮಾಡಿದವರು ಯಾರೇ ಆದರೂ ಕಾನೂನು ಕ್ರಮ ಕೈಗೊಳ್ಳಬೇಕು. ಪೊಲೀಸ್‌ಗಿರಿ ಸರಿಯಾಗಿ ನಡೆದರೆ, ನೈತಿಕ ಪೊಲೀಸ್‌ಗಿರಿ ಕಡಿಮೆಯಾಗುತ್ತದೆ. ಕೆಲವು ಘಟನೆಗಳ ಸಂದರ್ಭದಲ್ಲಿ ಸುಮೊಟೊ ಕೇಸು ಹಾಕಬೇಕು ಎಂಬ ಅಭಿಪ್ರಾಯ ಕೇಳಿ ಬಂತು.

ಸೈಬರ್ ಕ್ರೈಂ, ಡಿಜಿಟಲ್ ಅರೆಸ್ಟ್ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇಂತಹ ಕರೆಗಳು ಬಂದರೆ ತಕ್ಷಣ ಸಹಾಯವಾಣಿ ೧೯೩೦ಕ್ಕೆ ಕರೆ ಮಾಡಬೇಕು. ಮಾ.೩೧ರಂದು ರಮಜಾನ್ ಹಬ್ಬ ನಡೆಯಲಿದ್ದು, ಯಾವುದೇ ಮೆರವಣಿಗೆಗಳು ಇರುವುದಿಲ್ಲ. ಮಸೀದಿಯಲ್ಲಿ ಕಾರ್ಯಕ್ರಮಗಳು ಮಾತ್ರ ನಡೆಯುತ್ತವೆ. ವಾಟ್ಸ್ಯಾಪ್‌ಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡದೆ ಅನುಮಾನಗಳಿದ್ದರೆ ಇಲಾಖೆಯನ್ನು ವಿಚಾರಿಸಬೇಕೆಂಬ ಸೂಚನೆ ನೀಡಲಾಯಿತು.

ಪುತ್ತೂರು ನಗರ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ಮಾತನಾಡಿ, ಸೌಹಾರ್ದತೆ, ಸಮನ್ವಯತೆಯಿಂದ ಹಾಗೂ ಶಾಂತಿಯುತವಾಗಿ ಹಬ್ಬಗಳ ಆಚರಣೆ ನಡೆಯಬೇಕಾಗಿದ್ದು, ಸಾರ್ವಜನಿಕರ ಸಹಕಾರ ಅಗತ್ಯವಿದೆ. ಇತ್ತೀಚಿಗೆ ನೈತಿಕ ಪೊಲೀಸ್‌ಗಿರಿ ಕಡಿಮೆ ಆಗಿದ್ದು, ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ. ಡ್ರಗ್ಸ್ ಬಗ್ಗೆ ತಿಳಿದು ಬಂದರೆ ಮೇಲಾಽಕಾರಿಗಳಿಗೂ ಮಾಹಿತಿ ನೀಡುವ ಅವಕಾಶವಿದೆ. ಒಮ್ಮೆ ಡ್ರಗ್ಸ್ ತೆಗೆದುಕೊಂಡರೆ ೩ ತಿಂಗಳು ದೇಹದಲ್ಲಿ ಇರುತ್ತದೆ. ಎಲ್ಲರೂ ಸಮನ್ವಯದಿಂದ ಜಾಗೃತಿ ಕೆಲಸ ಮಾಡೋಣ ಎಂದರು.

ನಗರ ಪೊಲೀಸ್ ಠಾಣೆ ಉಪ ನಿರೀಕ್ಷಕ ಆಂಜನೇಯ ರೆಡ್ಡಿ ಮಾಹಿತಿ ನೀಡಿದರು. ಪ್ರಮುಖರಾದ ಮುರಳೀಕೃಷ್ಣ ಹಸಂತಡ್ಕ, ದಾಮೋದರ ಪಾಟಾಳಿ, ಸೀತಾರಾಮ ಶೆಟ್ಟಿ ಕೆದಂಬಾಡಿಗುತ್ತು, ಫಿಸಿಯೋಥೆರಪಿಸ್ಟ್ ಕೃಷ್ಣ ಪ್ರಸನ್ನ, ಎ.ಹೇಮನಾಥ ಶೆಟ್ಟಿ, ಹಮೀದ್ ಸಾಲ್ಮರ, ವಕೀಲ ನೂರುದ್ದಿನ್ ಸಾಲ್ಮರ, ರವಿಪ್ರಸಾದ್ ಶೆಟ್ಟಿ, ಮೌರಿಸ್ ಮಾಸ್ಕರೇನಸ್, ಯಾಕೂಬ್ ಮುಲಾರ್ ಮತ್ತಿತರರು ಉಪಸ್ಥಿತರಿದ್ದರು.

ಸೀಮಿತ ವ್ಯಕ್ತಿಗಳಿಗೆ ಸಭೆ

ನಗರ ಠಾಣೆ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಪ್ರಕರಣವನ್ನು ದಾಖಲಿಸಿಕೊಳ್ಳದೆ, ಕಳ್ಳರ ಪತ್ತೆಯೂ ಸರಿಯಾಗಿ ನಡೆಸುತ್ತಿಲ್ಲ ಎಂಬ ಆರೋಪಗಳಿವೆ. ಶಾಂತಿ ಸಭೆಯಲ್ಲಿ ಎಲ್ಲರಿಗೆ ಮಾಹಿತಿ ನೀಡಿದರೆ, ಈ ಬಗ್ಗೆ ಪ್ರಶ್ನಿಸುವ ಸಾಧ್ಯತೆಯಿದೆ ಮತು ಪೊಲೀಸರು ನಿಂದನೆಗೊಳಗಾಗುವ ಭಯದಲ್ಲಿ ಬೆರಳೆಣಿಕೆಯ ವ್ಯಕ್ತಿಗಳನ್ನು ಕರೆದು ಸಭೆಯನ್ನು ನಡೆಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net