ಶಾಂತವೇರಿ ಗೋಪಾಲಗೌಡರು ರಾಷ್ಟ್ರಕಾರಣಿ

4
Published on

ಮೈಸೂರು: ನಾಡು ಕಂಡ ಧೀಮಂತ ನಾಯಕ ಶಾಂತವೇರಿ ಗೋಪಾಲಗೌಡರು ರಾಜಕಾರಣಿಯಲ್ಲ ‘ರಾಷ್ಟ್ರಕಾರಣಿ’ ಆಗಿದ್ದರು ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದಗೌಡ ಬಣ್ಣಿಸಿದರು.
ಶ್ರೀ ನಟರಾಜ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ, ಕನ್ನಡ ಸಾಹಿತ್ಯ ಕಲಾಕೂಟದ ಸಂಯುಕ್ತಾಶ್ರಯದಲ್ಲಿ ಶ್ರೀ ನಟರಾಜ ಸಭಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಹಿರಿಯ ಸಮಾಜವಾದಿ ಶಾಂತವೇರಿ ಗೋಪಾಲಗೌಡ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.


ರಾಜಕಾರಣದಲ್ಲಿ ರಾಜಕಾರಣಿ ಮತ್ತು ರಾಷ್ಟ್ರಕಾರಣಿ ಎಂಬ ಎರಡು ಮಾದರಿಗಳಿವೆ. ರಾಜಕಾರಣಿ ಮುಂದಿನ ಚುನಾವಣೆ ಬಗ್ಗೆ ಚಿಂತಿಸುತ್ತಾರೆ. ರಾಷ್ಟ್ರಕಾರಣಿ ಮುಂದಿನ ಜನಾಂಗದ ಬಗ್ಗೆ ಆಲೋಚಿಸುತ್ತಾರೆ. ಈ ಸಾಲಿನ ಅಗ್ರಪಂಕ್ತಿಯ ನಾಯಕ ಗೋಪಾಲಗೌಡರು ಎಂದು ಅಭಿಪ್ರಾಯಪಟ್ಟರು.

ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧದ ದ್ವಾರದಲ್ಲಿ ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂದು ಬರೆಸಿದ್ದಾರೆ. ಇದಕ್ಕೆ ಆಕ್ಷೇಪ ಎತ್ತಿದ್ದ ಗೋಪಾಲಗೌಡ ಅವರು, ‘ಸರ್ಕಾರಿ ಕೆಲಸ ಶ್ರೀಸಾಮಾನ್ಯರ ಕೆಲಸ’ ಎಂದಾಗಬೇಕೆಂದು ಸಲಹೆ ನೀಡಿದ್ದರು. ಬದುಕಿನುದ್ದಕ್ಕೂ ಬಡವರು, ರೈತರು, ಕಾರ್ಮಿಕರ ಏಳೆಗೆಗಾಗಿ ದುಡಿದರು ಎಂದು ತಿಳಿಸಿದರು.
ಹೂವಿನಂತೆ ಮಧುರ ಮತ್ತು ವಜ್ರದಂತೆ ಕಠಿಣ ಎಂಬ ಸಂಸ್ಕೃತ ಮಾತಿಗೆ ಶಾಂತವೇರಿ ಗೋಪಾಲಗೌಡರು ಉತ್ತಮ ನಿದರ್ಶನ. ಅಖಂಡ ಕರ್ನಾಟಕದ ಕನಸು ಕಂಡರು. ಹರಿದು ಹಂಚಿಹೋಗಿರುವ ಪ್ರದೇಶಗಳನ್ನು ಒಗ್ಗೂಡಿಸಿದಾಗ ಮಾತ್ರ ಕರ್ನಾಟಕ ಬೆಳೆಯಲು ಸಾಧ್ಯ ಎನ್ನುತ್ತಿದ್ದರು. ಆಡಳಿತದಲ್ಲಿ ಕನ್ನಡ ಭಾಷೆ ಜಾರಿಗೆ ತಂದಾಗ ಅದರಲ್ಲಿ ಲೋಪಗಳನ್ನು ವಿವರಿಸಿದ್ದರು ಎಂದರು.

ಶಾಂತವೇರಿ ಗೋಪಾಲಗೌಡರು ಸ್ಟೇಟ್ಸ್‌ಮನ್. ಮೌಲ್ಯಾಧಾರಿತ ರಾಜಕೀಯ ಪ್ರಜ್ಞೆಗೆ ಹೆಸರಾದವರು. ಅವರ ಹಾದಿಯಲ್ಲಿ ಇಂದಿನ ರಾಜಕಾರಣಿಗಳು ಮುನ್ನಡೆಯಬೇಕು. ಅನಾರೋಗ್ಯದಿಂದ ಗೌಡರು 49ನೇ ವಯಸ್ಸಿಗೆ ನಿಧನರಾದರು. ಇನ್ನಷ್ಟು ಕಾಲ ಬದುಕಿದ್ದರೆ ನಾಡಿನ ಅಭಿವೃದ್ಧಿಗೆ ಬಹು ಅಮೂಲ್ಯ ಕಾಣಿಕೆ ನೀಡುತ್ತಿದ್ದರು ಎಂದು ಹೇಳಿದರು.

ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಮಾತನಾಡಿ, ಶಾಂತವೇರಿ ಗೋಪಾಲಗೌಡ ಅವರು ಒಮ್ಮೆ ಹರಿದ ಜುಬ್ಬಾ ತೊಟ್ಟಿರುವುದನ್ನು ನೋಡಿದ ಅಜೀಜ್ ಸೇಠ್ ಅವರು ನೊಂದುಕೊಂಡು 10 ಜುಬ್ಬಾ, 10 ಪಂಚೆ ಖರೀದಿಸಿ ಗೌಡರ ಕಚೇರಿಯಲ್ಲಿ ಇಟ್ಟು ಹೋಗಿದ್ದರು. ಒಂದು ವಾರ ಕಳೆದರೂ ಗೋಪಾಲಗೌಡರು ಆ ಬಟ್ಟೆಯನ್ನು ಮುಟ್ಟಿಯೂ ನೋಡಿರಲಿಲ್ಲ. ಬಳಿಕ ಅಜೀಜ್ ಸೇಠ್ ಅವರು, ಈ ಬಟ್ಟೆಗಳನ್ನು ನಿಮಗಾಗಿಯೇ ತಂದದ್ದು ಎಂದಾಗ ವಾಪಸ್ ತೆಗೆದುಕೊಳ್ಳುವಂತೆ ಕೋಪದಿಂದ ನುಡಿದಿದ್ದರು. ನೀವು ನನ್ನ ಗುರುಗಳು, ನಾನು ಕೊಟ್ಟ ಉಡುಗೊರೆಯನ್ನು ಸ್ವೀಕರಿಸಬೇಕೆಂದು ಪರಿಪರಿಯಾಗಿ ಕೇಳಿಕೊಂಡ ಬಳಿಕ ಬಟ್ಟೆಯನ್ನು ಸ್ವೀಕರಿಸಿದ್ದರು. ಇವತ್ತು ಗ್ರಾಮ ಪಂಚಾಯಿತಿ ಸದಸ್ಯನಿಗೂ ಇನ್ನೋವಾ ಕಾರು ಬೇಕು. ಸಾವಿರಾರು ರೂ. ಮೌಲ್ಯದ ಬಟ್ಟೆಗಳನ್ನು ತೊಡುತ್ತಾರೆ. ಆದರೆ ಮೂರು ಬಾರಿ ಶಾಸಕರಾಗಿದ್ದ ಗೋಪಾಲಗೌಡರು ಬಹಳ ಸರಳವಾಗಿ ಬದುಕಿದ್ದರು. ಅವರ ಈ ನಡೆ ಇಂದಿನ ರಾಜಕಾರಣಿಗಳಿಗೆ ಮಾದರಿ ಎಂದು ತಿಳಿಸಿದರು.


ಹಿರಿಯ ಸಮಾಜವಾದಿ ಕೋಣಂದೂರು ಲಿಂಗಪ್ಪ ಕನ್ನಡ ಚಳವಳಿಯ ಪ್ರವರ್ತಕರಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಅನ್ಯಭಾಷಿಕರ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದು 1963ರಲ್ಲಿ ಕನ್ನಡ ಯುವಜನ ಸಭಾ ಸ್ಥಾಪಿಸಿದರು. 1973ರಲ್ಲಿ ಡಿ.ದೇವರಾಜ ಅರಸು ಕರ್ನಾಟಕ ನಾಮಕರಣ ಮಾಡುವಲ್ಲಿ ಲಿಂಗಪ್ಪ ಅವರ ಒತ್ತಾಸೆ ಇದೆ ಎಂದು ಹೇಳಿದರು.

ಹಿರಿಯ ಸಮಾಜವಾದಿ, ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಮಾತನಾಡಿ, ಒಮ್ಮೆ ಗೋಪಾಲಗೌಡರನ್ನು ಕಾಣಲು ಮೊದಲ ಬಾರಿಗೆ ಬೆಂಗಳೂರಿಗೆ ಹೋದೆ. ರಾಜಧಾನಿಯಲ್ಲಿ ಕನ್ನಡಿಗರಿಗಿಂತ ತಮಿಳರ ಪ್ರಭಾವ. ವಿಳಾಸ ಕೇಳಿದರೆ ಹೇಳುವವರಿಲ್ಲ. ಈ ವಿಚಾರವನ್ನು ಗುರುಗಳಾದ ಗೋಪಾಲಗೌಡರ ಮುಂದೆ ಪ್ರಸ್ತಾಪಿಸಿ ಚಳವಳಿ ನಡೆಸಲು ಚಿಂತನೆ ನಡೆಸಿದೆವು. ಅದರ ಫಲವಾಗಿ ಮೈಸೂರಲ್ಲಿ ಪೂರ್ಣಚಂದ್ರ ತೇಜಸ್ವಿ, ಸುಂದರೇಶ್, ಕಡಿದಾಳ ಶಾಮಣ್ಣ, ಐತಾಳ್ ಮುಂತಾದವರು ಸೇರಿಕೊಂಡು ಕನ್ನಡ ಯುವ ಜನ ಸಭಾ ಆರಂಭಿಸಿದೆವು. ಅಂಗಡಿಗಳಲ್ಲಿ ಅಳವಡಿಸಿದ್ದ ಇಂಗ್ಲಿಷ್ ಬೋರ್ಡ್ ತೆರವು ಮಾಡಿ ಕನ್ನಡದ ಫಲಕ ಅಳವಡಿಸುವಂತೆ ಒತ್ತಾಯಿಸಿದೆವು ಎಂದು ಸ್ಮರಿಸಿದರು.

ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಸಮಾಜವಾದಿ ಕೋಣಂದೂರು ಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು. ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್.ಶಿವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಶಾಂತವೇರಿ ಗೋಪಾಲಗೌಡ ಸಮಾಜವಾದಿ ಪ್ರತಿಷ್ಠಾನದ ರಾಮ ಮನೋಹರ ಶಾಂತವೇರಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹೆಳವರಹುಂಡಿ ಸಿದ್ದಪ್ಪ, ಕಸಾಪ ನಗರ ಅಧ್ಯಕ್ಷ ಕೆ.ಎಸ್.ಶಿವರಾಮು ಇದ್ದರು. ಎಂ.ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗಾಯಕಿ ಚೂಡಾಮಣಿ ವಚನ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net