

ಜಗಳೂರು: ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಅವಧೂತ ಶಾಂತವೀರ ಸ್ವಾಮೀಜಿಗಳ 35ನೇ ಜಾತ್ರಾ ಮಹೋತ್ಸವ ಪ್ರಯುಕ್ತ ತಾಲೂಕು ಕಚೇರಿ ಪಕ್ಕದ ಸಂತೆ ಮೈದಾನದಲ್ಲಿ ಭಕ್ತರ ಬಳಗ ಗುರುವಾರ ಅನ್ನ ದಾಸೋಹ ಏರ್ಪಡಿಸಿತ್ತು.
ಬೆಳಗ್ಗೆ ಶಾಂತವೀರ ಸ್ವಾಮೀಜಿಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಶ್ರೀಗಳು ದಾಸೋಹಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕಣ್ವಕುಪ್ಪೆ ಗವಿಮಠ ಐತಿಹಾಸಿಕ ಹಿನ್ನೆಲೆ ಹೊಂದಿರುವ ಪುಣ್ಯಕ್ಷೇತ್ರವಾಗಿದೆ. ಇಲ್ಲಿ ಕಣ್ವ ಮಹರ್ಷಿಗಳು ತಪಸ್ಸು ಮಾಡಿದ್ದಾರೆ. 30 ವರ್ಷಗಳ ಕಾಲ ಶಾಂತವೀರ ಸ್ವಾಮೀಜಿ ಜಗಳೂರಿನಲ್ಲಿ ಮಾಡಿದ ಪವಾಡಗಳು ಇಂದಿಗೂ ಜೀವಂತವಾಗಿವೆ. ಜಗಳೂರಿನಿಂದ ಕಂದಿಕೆರೆಗೆ ಹೋಗಿ ಐಕ್ಯರಾಗಿದ್ದಾರೆ. ಅವರ ಪುಣ್ಯ ಸ್ಮರಣೆಗಾಗಿ ಜಾತ್ರೆ ನಡೆಯುತ್ತಿದೆ ಎಂದು ತಿಳಿಸಿದರು.
ಕಂದಿಕೆರೆಯಲ್ಲಿ ಶಾಂತವೀರ ಸ್ವಾಮೀಜಿಗಳ ರಥೋತ್ಸವ ಗುರುವಾರ ಅದ್ದೂರಿಯಾಗಿ ಜರುಗುತ್ತಿದೆ. ತಾಲೂಕಿನ ಭಕ್ತರು ಇದೇ ಮೊದಲ ಬಾರಿಗೆ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಿ ಕೋಟಿ ಪುಣ್ಯ ಗಳಿಸಿದ್ದಾರೆ ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್, ಜಿ.ಪಂ ಮಾಜಿ ಸದಸ್ಯ ಕೆ.ಪಿ ಪಾಲಯ್ಯ, ಪ.ಪಂ ಅಧ್ಯಕ್ಷ ನವೀನ್ಕುಮಾರ್, ಭಕ್ತರ ಬಳಗದ ನಿಬಗೂರು ಕೃಷ್ಣಮೂರ್ತಿ, ಲಿಂಗಣ್ಣನಹಳ್ಳಿ ಅಜ್ಜಯ್ಯ, ಬಿದರಕೆರೆ ರವಿಕುಮಾರ್, ಶೆಟ್ಟಿಗೊಂಡನಹಳ್ಳಿ ರಾಜಪ್ಪ, ಗಂಗಪ್ಪ, ಗುಡ್ಡದ ನಿಂಗನಹಳ್ಳಿ ರಾಜು, ಭರಮಸಮುದ್ರ ಶಿವಲಿಂಗಪ್ಪ, ಶೇಖರಪ್ಪ, ಗಿರೀಶ್, ಶಾಮಣ್ಣ ಕಾಮಗೇತನಹಳ್ಳಿ, ಗಂಗಾಧರ್, ಪಪಂ ಸದಸ್ಯ ರಮೇಶ್ ರೆಡ್ಡಿ, ಗೌರಿಪುರ ಶಿವಣ್ಣ, ಸುಧೀರ್ರೆಡ್ಡಿ ಮತ್ತಿತರರಿದ್ದರು.