

ಹುಬ್ಬಳ್ಳಿ: ಪರಮಾತ್ಮನ ಶಕ್ತಿಯನ್ನು ಭಕ್ತರಿಗೆ ದಯ ಪಾಲಿಸುವ ಮಧ್ಯವತಿರ್ಯಾಗಿ ಮಂದಿರದ ಕಳಸ ಕೆಲಸ ಮಾಡುತ್ತದೆ. ಕಾಸ್ಮಿಕ್ ಎನರ್ಜಿ ಇರುವುದರಿಂದ ಕಳಸದ (ಶಿಖರ) ದರ್ಶನ ಮಾಡಿ ಅದ್ಭುತ ಶಕ್ತಿಯ ಆನಂದವನ್ನು ಪಡೆಯಬಹುದು ಎಂದು ಶ್ರೀಶೈಲ ಸೂರ್ಯ ಸಿಂಹಾಸನ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿಯ ಸಿದ್ಧಾರೂಢ ಮಠದ ಆವರಣದಲ್ಲಿ ಅಭಿನವನಗರದ ಆರೂಢಜ್ಯೋತಿ ಶ್ರೀ ಶಾಂತಾಶ್ರಮದ ವತಿಯಿಂದ ಗುರುವಾರ ಏರ್ಪಡಿಸಿದ್ದ ರಜತಲಿಂಗ ಪೂಜೆ, ಉಡಿ ತುಂಬುವುದು ಹಾಗೂ ದ್ವಾದಶ ಜ್ಯೋತಿರ್ಲಿಂಗ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಶೈಲವು ಶಿಖರದಿಂದಾಗಿ ಹೆಸರುವಾಸಿಯಾಗಿದೆ. ಬರುವ ಭಕ್ತರು ಪೀಠದ ಶಿಖರ ದರ್ಶನ ಮಾಡಿದರೆ ಸಾಕು ಜೀವನ ಪಾವನವಾಗುತ್ತದೆ. ಅಂತಹ ರಾಜಗೋಪುರ ಶಿಖರದ ಕಳಸಾರೋಹಣವನ್ನು ಇಲ್ಲಿ ನಮ್ಮಿಂದ ಮಾಡಿಸಿರುವುದು ತಮಗೆ ಸಂತೋಷ ತಂದಿದೆ ಎಂದರು.
ಮನುಷ್ಯ ಕೂಡ ಜ್ಞಾನದ ಶಿಖರ ಏರಬೇಕು. ಆ ಮೂಲಕ ಆತ್ಮಸಾಾತ್ಕಾರ ಮಾಡಿಕೊಳ್ಳಬೇಕು. ಇದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಸಿದ್ಧಾರೂಢರು ಸ್ಥಿತಪ್ರಜ್ಞರು. ಅಂತಹ ಸ್ಥಿತಿಯನ್ನು ನಾವೆಲ್ಲರೂ ತಲುಪಲು ಪ್ರಯತ್ನಿಸಬೇಕು. ಆಗ ಸುಖ& ದುಃಖ ಎಂಬುದು ಮನುಷ್ಯನಿಗೆ ಇರುವುದಿಲ್ಲ. ಇದಕ್ಕಾಗಿ ಮನಸ್ಸನ್ನು ಕೃಷಿ ಮಾಡಬೇಕು. ಸದಾ ಸಂತೃಪ್ತ ಜೀವನ ನಡೆಸಬೇಕು ಎಂದು ಆಶೀರ್ವಚನ ನೀಡಿದರು.
ಕಾಶಿ ಜ್ಞಾನಸಿಂಹಾಸನ ಪೀಠದ ವಿಶ್ವಾರಾಧ್ಯ ಶ್ರೀಗಳು ಮಾತನಾಡಿ, ಮನುಷ್ಯ ಇಂದು ಯಂತ್ರದಂತೆ ಕೆಲಸ ಮಾಡುತ್ತಿದ್ದಾನೆ. ನೆಮ್ಮದಿ ಎಂಬುದು ಇಲ್ಲವಾಗಿದೆ. ಸಂಸಾರದಲ್ಲಿದ್ದುಕೊಂಡು ಪಾರಮಾಥಿರ್ಕ ಸಾಧನೆ ಮಾಡುವತ್ತ ಚಿತ್ತ ಹರಿಸಬೇಕು. ಸ್ಥಿತಪ್ರಜ್ಞರಾದರೆ ಇದೆಲ್ಲ ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಿರಹಟ್ಟಿ ಕ್ಕೀರೇಶ್ವರ ಸಂಸ್ಥಾನಮಠದ ಜಗದ್ಗುರು ಕ್ಕೀರ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಜನ್ಮಕೊಟ್ಟ ತಂದೆ ತಾಯಿಯೇ ಕಾಶಿ, ರಾಮೇಶ್ವರ ಇದ್ದಂತೆ. ಅವರ ಸೇವೆ ಮಾಡಿದರೆ ಧರ್ಮ ಕ್ಷೇತ್ರದ ದರ್ಶನ ಪಡೆದ ಪುಣ್ಯ ಸಿಗುತ್ತದೆ. ದ್ವೇಷ ಬಿಡು ಪ್ರೀತಿ ಮಾಡು ಎಂಬ ಮಾತನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮನಸ್ಸು ಹಾಳು ಮಾಡಿಕೊಳ್ಳಬಾರದು ಎಂದು ಹೇಳಿದರು.
ಬೆಂಗಳೂರು ಸಿದ್ಧಾರೂಢ ಆಶ್ರಮದ ಆರೂಢ ಭಾರತಿ ಸ್ವಾಮೀಜಿ, ಲೋಕೋದ್ಧಾರಕ್ಕೆ ಬಂದಿರುವ ಅವತಾರ ಪುರುಷ ಶ್ರೀ ಸಿದ್ಧಾರೂಢರು ಸ್ಥಿತಪ್ರಜ್ಞರು. ಏರಿಳಿತಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಸು, ಗುಣ ಯಾರಿಗೆ ಇದೆಯೋ ಅವರೇ ಸ್ಥಿತಪ್ರಜ್ಞರು. ಎಲ್ಲರಿಗೂ ಈ ಪ್ರಜ್ಞೆ ಬರಬೇಕು ಎಂದು ಹೇಳಿದರು.
ಹುಕ್ಕೇರಿ ಹಿರೇಮಠದ ಸದ್ಗುರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಸ್ಥಿತಪ್ರಜ್ಞ ಸ್ಥಿತಿಯನ್ನು ಅನುಭವಿಸಬೇಕು. ಸಿದ್ಧಾಂತ ಶಿಖಾಮಣಿ, ವಚನಶಾಸ್ತ್ರ, ನಿಜಗುಣರ ಶಾಸ್ತ್ರ ಎಲ್ಲವೂ ಒಂದೇ. ಎಲ್ಲರನ್ನೂ ಪ್ರೀತಿಸುವ ಗುಣ ಬೆಳೆಸಿಕೊಂಡು ಮಠ ಎಂಬ ಮಟ್ಟವನ್ನು ದಾಟಿ ಹೋದಾಗ ಸಾಧನೆ ಎಂಬುದು ಸಾಧ್ಯವಾಗುತ್ತದೆ ಎಂದರು.
ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಗದಗ ಶಿವಾನಂದ ಮಠದ ಜಗದ್ಗುರು ಅಭಿನವ ಶಿವಾನಂದ ಸ್ವಾಮೀಜಿ, ತಿರುಪತಿ ವಸಿಷ್ಟಾಶ್ರಮದ ಸ್ವಸ್ವರೂಪಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ರಾಣೆಬೆನ್ನೂರಿನ ಶ್ರೀ ಮಲ್ಲಯ್ಯಜ್ಜನವರು, ವಿವಿಧ ಮಠಾಧೀಶರು, ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪಾದಪೂಜೆ: ಮೂರು ದಿನಗಳ ಕಾಲ ನಡೆದ ಧಾಮಿರ್ಕ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸ್ವಾಮೀಜಿಗಳ ಪಾದಪೂಜೆಯನ್ನು ಮಾಡಲಾಯಿತು. ಗುರುವಾರ ಕೂಡ ವೇದಿಕೆಯಲ್ಲಿ ಆಸೀನರಾಗಿದ್ದ ಸ್ವಾಮೀಜಿಗಳಿಗೆ ಭಕ್ತರು ಪಾದಪೂಜೆ ನೆರವೇರಿಸಿದರು.