

ಹೊನ್ನಾಳಿ: ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿಯಂತಹ ಮಹಾನ್ ವಚನಕಾರರಿಂದ ಸಮಾನತೆಯ ಸಮಾಜ ನಿರ್ವಣವಾಗಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತ್ಯುತ್ಸವದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ್ಪ ನಮನ ಸಲ್ಲಿಸಿ ಮಾತನಾಡಿದರು.
ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರು ಈ ನಾಡಿನಲ್ಲಿ ಜನಿಸದಿದ್ದರೆ ಇಂದು ಸಾಮರಸ್ಯ ಸಮಾಜ, ಎಲ್ಲರಿಗೂ ಸಮಾನ ಗೌರವ, ರಕ್ಷಣೆ, ಬದುಕುವ ಹಕ್ಕು ಲಭಿಸುತ್ತಿರಲ್ಲಿಲ್ಲ. ಅವರಿಂದ ನಾವೆಲ್ಲರೂ ನೆಮ್ಮದಿ, ಶಾಂತಿಯಿಂದ ಬದುಕುವಂತಾಗಿದೆ. ಬಸವಣ್ಣನವರ ಸಮಕಾಲೀನರಾದ ಮಡಿವಾಳ ಮಾಚಿದೇವ ಕೂಡ ಒಬ್ಬ ಉತ್ತಮ ವಚನಕಾರರಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕ್ರಾಂತಿಯೋಗಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಕುವಂತೆ ಆದೇಶ ಮಾಡಿರುವುದು ನಮ್ಮೆಲ್ಲರ ಸುದೈವ ಎಂದರು.
ತಹಸೀಲ್ದಾರ್ ಪಟ್ಟರಾಜಗೌಡ ಮಾತನಾಡಿ, ಹಿಂದಿನ ಅದೆಷ್ಟು ವಚನಕಾರರು ಲಕ್ಷಾಂತರ ವಚನಗಳನ್ನು ರಚಿಸಿರುವ ಬಗ್ಗೆ ಅವರದೇ ಕೃತಿಗಳಲ್ಲಿ ಉಲ್ಲೇಖವಿದ್ದರೂ ನಮಗೆ ಲಭಿಸಿರುವುದು ಸ್ವಲ್ಪ ಮಾತ್ರ. ಅಲ್ಲದೆ ವಚನಗಳು ಸಮಾಜ ಸುಧಾರಣೆಗೆ ಶಕ್ತಿಶಾಲಿ ಅಸ್ತ್ರಗಳಾಗಿ ತೋರುತ್ತವೆ ಎಂದರು.
ನಿವೃತ್ತ ಶಿಕ್ಷಕ ಚಂದ್ರಪ್ಪ ಮಾತನಾಡಿ, ಮಡಿವಾಳ ಮಾಚಿದೇವ ಅವರು ಸಾವಿರಾರು ವಚನಗಳನ್ನು ರಚಿಸಿದ್ದರು. ಇದುವರೆಗೆ ಕೇವಲ 399 ವಚನಗಳು ಮಾತ್ರ ಲಭ್ಯವಾಗಿದೆ ಎಂದರು.
ಹೊನ್ನಾಳಿ ತಾಲೂಕು ಮಡಿವಾಳ ಮಾಚಿದೇವ ಸಮಾಜದ ಅಧ್ಯಕ್ಷ ಎಂ.ಆರ್. ಮಹಾಂತೇಶ್, ನ್ಯಾಮತಿ ತಾಲೂಕು ಅಧ್ಯಕ್ಷ ರವಿಕುಮಾರ್ ಇತರರಿದದ್ದರು.