ಶಾಂತಲಿಂಗ ಶ್ರೀಗಳು ಸಾಧನೆಯ ಮೇರು ಮಹಾಂತರು

shantling swameeji
Published on

ಉಪ್ಪಿನಬೆಟಗೇರಿ: ನಿತ್ಯ ಸೂರ್ಯೋದಯಕ್ಕೂ ಮುನ್ನವೇ ಇಷ್ಟಲಿಂಗಾರ್ಚನೆಗೈದು ನಿರಂತರ ಧ್ಯಾನದ ಅನುಸಂಧಾನದಲ್ಲಿ ತನ್ಮಯರಾಗುತ್ತಿದ್ದ ಲಿಂಗೈಕ್ಯ ಶ್ರೀ ಗುರುಶಾಂತಲಿಂಗ ಶಿವಾಚಾರ್ಯರು ಶಿವಯೋಗ ಸಾಧನೆಯ ಮೇರು ಮಹಾಂತರು ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯರು ಹೇಳಿದರು.

ಧಾರವಾಡ ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಲಿಂಗೈಕ್ಯ ಶ್ರೀ ಗುರುಶಾಂತಲಿಂಗ ಶಿವಾಚಾರ್ಯರ 94ನೇ ಪುಣ್ಯಸಂಸ್ಮರಣೆ ನಿಮಿತ್ತ ಮಂಗಳವಾರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

ಪುಣ್ಯಾರಾಧನೆಯಲ್ಲಿ ಪಾಲ್ಗೊಂಡು ಪುಷ್ಪನಮನ ಸಲ್ಲಿಸಿದ ಚಿಕ್ಕಮಗಳೂರು ಜಿಲ್ಲೆಯ ಬೇರುಗಂಡಿ ಬ್ರಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯರು ಮಾತನಾಡಿ, ಶ್ರೀ ಜಗದ್ಗುರು ಪಂಚಾಚಾರ್ಯರ ಸನಾತನ ಗುರು ಪರಂಪರೆಯಲ್ಲಿ ಚಾರಿತ್ರಿಕ ಘನತೆ ಹೊಂದಿರುವ ಅಮ್ಮಿನಬಾವಿ ಪಂಚಗೃಹ ಸಂಸ್ಥಾನ ಹಿರೇಮಠದ ಲಿಂಗೈಕ್ಯ ಪೂಜ್ಯರ ಶಿವಯೋಗ ಸಾಧನೆಯನ್ನು ಹಿರಿಯ ಶ್ರೀಗಳು ನಿರಂತರ ಸ್ಮರಣೆ ಮಾಡಿಕೊಂಡು ಗುರುಗಳ ಸಾಧನಾ ಪಥದಲ್ಲಿ ಮುನ್ನಡೆದಿರುವುದು ಎಲ್ಲ ಕಿರಿಯ ಶ್ರೀಗಳಿಗೆ ಸ್ಫೂರ್ತಿ ನೀಡಿದೆ ಎಂದರು.

ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯರು ಮಾತನಾಡಿ, 10ನೇ ಶತಮಾನದಿಂದಲೂ ಧರ್ಮ ಜಾಗೃತಿ ಕೈಂಕರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿಂದಿನ ಎಲ್ಲ ಲಿಂಗೈಕ್ಯ ಶಿವಾಚಾರ್ಯರು ಭಕ್ತಗಣಕ್ಕೆ ಧರ್ಮ-ಸಂಸ್ಕೃತಿ-ಸಂಸ್ಕಾರದ ಬೋಧನೆಗೈದು ಜನಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.

ಅಲಂಕಾರ ಪೂಜೆ: ಪುಣ್ಯಸಂಸ್ಮರಣೆಯ ಅಂಗವಾಗಿ ಲಿಂಗೈಕ್ಯ ಶ್ರೀ ಗುರುಶಾಂತಲಿಂಗ ಶಿವಾಚಾರ್ಯರ ಗದ್ದುಗೆಗೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ನೂತನಾಂಬರ ಧಾರಣೆಯ ಅಲಂಕಾರ ಪೂಜೆಯಲ್ಲಿ ಶಿವಾನಂದಸ್ವಾಮಿ ಹಿರೇಮಠ, ಸೋಮಲಿಂಗಶಾಸ್ತ್ರಿ ಗುಡ್ಡದಮಠ, ಈರಯ್ಯ ಹಿರೇಮಠ, ವಿನಾಯಕ ಹಿರೇಮಠ, ಶಿವಯೋಗಿ ಹಿರೇಮಠ ಪಾಲ್ಗೊಂಡಿದ್ದರು

ವಿ.ಬಿ. ಕೆಂಚನಗೌಡರ, ಬಸವಣ್ಣೆಪ್ಪ ಪೂಜಾರ, ಹುಲೆಪ್ಪ ಜೀವಾಪೂರ, ಗೂಳಪ್ಪ ಪೂಜಾರ, ಶಂಕ್ರೆಪ್ಪ ಮುಂದಿನಮನಿ, ಮಂಜುನಾಥ ಹೂಲಿ, ಮನೋಹರ ಶಿವಯ್ಯನಮಠ, ಶಿವಯ್ಯ ಬಣವಿ ಉಪಸ್ಥಿತರಿದ್ದರು. ಪುಣ್ಯಸಂಸ್ಮರಣೆಯ ಅಂಗವಾಗಿ ಗಣಾರಾಧನೆ ಮತ್ತು ಪ್ರಸಾದ ವಿತರಣೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net