

ರೋಣ: ಶಾಂತಗೇರಿ ಗ್ರಾಮಸ್ಥರು ಕಳೆದ ಹಲವು ವರ್ಷಗಳಿಂದ ಕೊಳಚೆ ನೀರಿನ ದುರ್ವಾಸನೆ ಸಹಿಸಿಕೊಂಡು ಬದುಕುತ್ತಿದ್ದಾರೆ. ಈ ಕುರಿತು ಗ್ರಾಪಂ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಈ ಹಿಂದೆ ಗ್ರಾಮದ ಬಹುತೇಕ ಚರಂಡಿಗಳ ಮಲಿನ ನೀರು ಹರಿದು ಗ್ರಾಮದ ಹಿರೇಬಾವಿ ಸೇರುತ್ತಿತ್ತು. ಆದರೆ, ಹಿರೇಬಾವಿಯು ಗ್ರಾಮದ ದೇಸಾಯಿ ಅವರ ಒಡೆತನಕ್ಕೆ ಸೇರಿದ್ದರಿಂದ ದೇಸಾಯಿ ಅವರು ಚರಂಡಿಯ ಮಲಿನ ನೀರನ್ನು ತಮ್ಮ ಬಾವಿಗೆ ಬಿಡದಂತೆ ಎಚ್ಚರಿಕೆ ನೀಡಿದ ಪರಿಣಾಮ ಗ್ರಾಮದ ಮಲಿನ ನೀರು ಸರಾಗವಾಗಿ ಹರಿದು ಹೋಗದೆ ಎಲ್ಲೆಂದರಲ್ಲಿ ರಸ್ತೆ ಹಾಗೂ ಮನೆಗಳ ಮುಂದೆ ನಿಂತಿರುವುದರಿಂದ ದುರ್ವಾಸನೆ ಸಹಿಸಿಕೊಂಡೆ ಇರಬೇಕಾಗಿದೆ ಎಂಬುದು ಗ್ರಾಮಸ್ಥರ ಅಳಲು.
ನಿತ್ಯವೂ ಇದೇ ಸಮಸ್ಯೆ. ದೂರು ನೀಡಿದಾಗ ಗ್ರಾಪಂನವರು ಕಾಟಾಚಾರಕ್ಕೆ ಎಂಬಂತೆ ಆರು ತಿಂಗಳಿಗೊಮ್ಮೆ ಬಂದು ರಸ್ತೆಯಲ್ಲಿ ನಿಂತ ಮಲಿನ ನೀರನ್ನು ಹೊರ ಹಾಕಿ ಹೋಗುತ್ತಾರೆ. ಆದಾದ ಕೆಲವೆ ದಿನಗಳಲ್ಲಿ ಮತ್ತೆ ರಸ್ತೆ ಮೇಲೆ ಮಲಿನ ನೀರು ನಿಲ್ಲುತ್ತದೆ. ನಮಗಂತೂ ದೂರು ನೀಡಿ ಸಾಕಾಗಿದೆ. ಕಳೆದ ಒಂದು ವರ್ಷದಿಂದ ದೊಡ್ಡ ಚರಂಡಿ ಸ್ವಚ್ಛಗೊಳಿಸದ ಕಾರಣ ಚರಂಡಿ ತುಂಬ ಹೂಳು ಬ್ಲಾಕ್ ಆಗಿದೆ. ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಪಿಂಜಾರ ಹಾಗೂ ಘಂಟಿ ಸಂದಿ ನಿವಾಸಿಗಳು ಒತ್ತಾಯಿಸಿದ್ದಾರೆ.
ನಮ್ಮ ಬಡಾವಣೆಯ ಅಕ್ಕ-ಪಕ್ಕದ ಗ್ರಾಮಗಳ ದೊಡ್ಡ ಗಟಾರ ಇದೆ. ಈ ಗಟಾರ ಅನ್ನು ಹಲವು ವರ್ಷಗಳಿಂದ ಸ್ವಚ್ಛಗೊಳಿಸದ ಕಾರಣ ಕಲುಷಿತ ನೀರು ಹಾಗೂ ಹೂಳು ತುಂಬಿಕೊಂಡಿವೆ. ಇದರಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ದುರ್ನಾತ ಬೀರುತ್ತಿದೆ. ಇಲ್ಲಿಂದ ಮನೆಗಳನ್ನು ಖಾಲಿ ಮಾಡಿಕೊಂಡು ಬೇರೆಡೆ ಹೋಗುವ ಪರಿಸ್ಥಿತಿ ನಿರ್ವಣವಾಗಿದೆ. | ರಾಜೇಖಾನ್ ಬೆನಹಾಳ, ಶರಣಪ್ಪ ಮಲ್ನಾಡದ, ಅಂದಪ್ಪ ಉಸಲಕೊಪ್ಪ, ಸ್ಥಳೀಯರು