

ವಿಜಯವಾಣಿ ಸುದ್ದಿಜಾಲ ಅಥಣಿ ಗ್ರಾಮೀಣ
ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಿಸಬೇಕು. ಈ ಕುರಿತು ಎಲ್ಲರಿಗೂ ಅರಿವು ಮೂಡಿಸಬೇಕು ಎಂದು ಅಥಣಿ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ ಗೌರಾಣಿ ಹೇಳಿದರು.
ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದ ರೇಣುಕಾ ಸಕ್ಕರೆ ಕಾರ್ಖಾನೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಅಥಣಿ ಹಾಗೂ ಬುರ್ಲಟ್ಟಿ ರೇಣುಕಾ ಸಕ್ಕರೆ ಕಾರ್ಖಾನೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವ ಸ್ವಾರ್ಥದಿಂದ ಪರಿಸರ ನಾಶ ಮಾಡುತ್ತಿದ್ದಾನೆ. ಇದರಿಂದ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಳ್ಳುತ್ತಿದೆ. ಪರಿಸರ ದಿನ ಆಚರಣೆ ಸೀಮಿತವಾಗಿರದೆ ನಿರಂತರವಾಗಿರಬೇಕು. ಪರಿಸರ ಸಂರಕ್ಷಣೆ ಕುರಿತು ಮಕ್ಕಳಿಗೆ ಬಾಲ್ಯದಲ್ಲೇ ತಿಳಿವಳಿಕೆ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ರೇಣುಕಾ ಸಕ್ಕರೆ ಕಾರ್ಖಾನೆ ಜಿಎಂ ಸಂಜೀವ ತೇರದಾಳ ಮಾತನಾಡಿ, ಆಧುನಿಕ ಯುಗದಲ್ಲಿ ನಿಸರ್ಗದೊಂದಿಗೆ ದೂರದೃಷ್ಟಿ ಹಾಗೂ ಹೊಂದಾಣಿಕೆಯಿಂದ ಜೀವನ ಸಾಗಿಸುವುದು ಅಗತ್ಯವಾಗಿದೆ ಎಂದರು.
ರೇಣುಕಾ ಸಕ್ಕರೆ ಕಾರ್ಖಾನೆ ಎಜಿಎಂ ಎನ್.ಪಿ.ಹರ್ಷ ಪ್ರತಿಜ್ಞಾವಿಧಿ ಬೋಧಿಸಿದರು. ರಾಜಕುಮಾರ ಅಡಹಳ್ಳಿ, ಆರ್.ಎಸ್. ಪಾಟೀಲ, ಮಹಾಂತೇಶ ಸೊಂಪನ್ನವರ, ವೈ.ಕೆ. ಗುರುಸಿದ್ದನೂರ, ಅಭಿಜಿತ್ ಕುಲಕರ್ಣಿ, ಕಿಶೋರ ಸೂರ್ಯವಂಶಿ, ಉತ್ತಮ ದೇಸಾಯಿ, ಆನಂದ ಕಾಂಬಳೆ, ಸುಭಾಷ ಮಾಳಿ, ಕಿರಣ ಬಡಿಗೇರ ಇತರರು ಇದ್ದರು.