

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಏಳ್ಗೆ ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ವಂಚನೆ ಪ್ರಕರಣಕ್ಕೆ ಅವರ ಹೆಸರು ತಳಕು ಹಾಕುವ ಯತ್ನ ಮಾಡುತ್ತಿದ್ದು, ಇದು ದುರುದ್ದೇಶದಿಂದ ಕೂಡಿದೆ ಎಂದು ಕೆಎಲ್ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಹೇಳಿದ್ದಾರೆ.
ಜೋಶಿ ಅವರು ಸಂಸದರಾಗಿ, ಸಚಿವರಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಸತತ 5ನೇ ಬಾರಿ ಸಂಸದರಾಗಿ, ಜನರ ಮನಸ್ಸು ಗೆದ್ದಿದ್ದಾರೆ. ಅವರ ಖ್ಯಾತಿಯನ್ನು ಸಹಿಸದ ಕೆಲವರು ಅವರ ಕೀತಿರ್ಗೆ ಭಂಗ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅವರೊಬ್ಬ ಸರಳ, ಸಜ್ಜನ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಹೋರಾಟದ ಮೂಲಕ ರಾಜಕೀಯದಲ್ಲಿ ಮೇಲೆ ಬಂದಿದ್ದಾರೆ. ಸಚಿವರಾಗಿ ನಿತ್ಯವೂ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತಾರೆ. ಇಂತಹ ವ್ಯಕ್ತಿಗೆ ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿಸಲು ಹೊರಟಿರುವುದು ಸರಿಯಲ್ಲ.
ಈ ವಿಷಯದಲ್ಲಿ ಜೋಶಿ ಅವರು ಎದೆಗುಂದದೆ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಬೇಕು. ಆತ್ಮಸ್ಥೈರ್ಯದಿಂದ ಮುಂದುವರಿಯಬೇಕು ಎಂದು ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.