ಹುಬ್ಬಳ್ಳಿ: ನಗರದ ಶ್ರೀ ಗುರುಸಿದ್ದೇಶ್ವರ ಸಹಕಾರ ಬ್ಯಾಂಕ್ ಅಧ್ಯಕ್ಷ, ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಅವರಿಗೆ ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಲ್ಲಿನ ಸಾಧನೆಗಾಗಿ ರಾಜ್ಯ ಸರ್ಕಾರದ ಸಹಕಾರ ಕ್ಷೇತ್ರದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಘೋಷಿಸಲಾಗಿದೆ.
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಬಳಿಯ ಮೈದಾನದಲ್ಲಿ ನ. 17ರಂದು ಏರ್ಪಡಿಸಿರುವ ಸಹಕಾರ ಸಪ್ತಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ಗಣ್ಯರು ಮುನವಳ್ಳಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವರು.
ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷರೂ ಆಗಿರುವ ಶಂಕ್ರಣ್ಣ ಮುನವಳ್ಳಿ ಅವರು ಗುರುಸಿದ್ದೇಶ್ವರ ಸಹಕಾರ ಬ್ಯಾಂಕ್ ಅನ್ನು ಪುನಃ ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಇಲ್ಲಿ ಉಲ್ಲೇಖನೀಯ.