ಬೆಳಗಾವಿ ಕೀರ್ತಿ ಹೆಚ್ಚಿಸಿದ ಶಂಕರಾನಂದ

31_BGV_3
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಕೇಂದ್ರದ ಮಾಜಿ ಸಚಿವ ದಿ. ಬಿ.ಶಂಕರಾನಂದ ಅವರು ಜಿಲ್ಲೆಯಲ್ಲಿ ಹುಟ್ಟಿ, ಬೆಳಗಾವಿಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸಿದ ಹೆಮ್ಮೆಯ ಸುಪುತ್ರ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಬಣ್ಣಿಸಿದರು.

ಮಾಜಿ ಸಂಸದ ದಿ. ಬಿ.ಶಂಕರಾನಂದ ಅವರ ಜನ್ಮ ಶತಾಬ್ದಿ ನಿಮಿತ್ತ ನಗರದ ಕ್ಲಬ್ ರಸ್ತೆಗೆ ‘ಬಿ.ಶಂಕರಾನಂದ ಮಾರ್ಗ’ ಎಂದು ಮರು ನಾಮಕರಣ ಮತ್ತು ಬಿ. ಶಂಕರಾನಂದ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಂಕರಾನಂದ ಅವರದ್ದು ಸರಳ ಸಜ್ಜನಿಕೆಯ ವ್ಯಕ್ತಿತ್ವ. ಅವರೆಂದು ತಮ್ಮ ಅಧಿಕಾರದ ದುರುಪಯೋಗ ಪಡೆಸಿಕೊಂಡಿಲ್ಲ. ಹಲವು ಯೋಜನೆಗಳನ್ನು ತಂದು ಬೆಳಗಾವಿಯೊಂದಿಗೆ ದೇಶವನ್ನೂ ಬೆಳೆಸಿದವರು. ದಿ.ಶಂಕರಾನಂದ ಅವರು 7 ಬಾರಿ ಸಂಸದರಾಗಿ, ಕೇಂದ್ರದ ಕಾನೂನು, ಆರೋಗ್ಯ, ಸಂಸದೀಯ ವ್ಯವಹಾರ, ಇಂಧನ, ನೀರಾವರಿ, ಶಿಕ್ಷಣ ಸಚಿವರಾಗಿ ದೇಶಾದ್ಯಂತ ಸಂಪರ್ಕ ಸಾಧಿಸಿದ್ದರು. ಜತೆಗೆ ಆರೋಗ್ಯ ಸಚಿವರಾಗಿದ್ದಾಗ ಹೊರದೇಶದಿಂದ ವೈದ್ಯಕೀಯ ಪರಿಕರಗಳನ್ನು ತರುವುದಕ್ಕೆ ಪರವಾನಗಿ ಕೊಡಿಸಿದ್ದರು. ನಾನು ರಾಜಕೀಯ ಪ್ರವೇಶಿಸುವುದಕ್ಕೆ ಅವರೇ ಪ್ರಮುಖ ಕಾರಣ ಎಂದು ಹೇಳಿದರು.

ಶಾಸಕ ಅಭಯ ಪಾಟೀಲ ಮಾತನಾಡಿ, ದಿ.ಶಂಕರಾನಂದ ಅವರು ಮುಖ್ಯಮಂತ್ರಿಗಳಾಗಲಿಲ್ಲ. ಆದರೆ, ಹಲವರನ್ನು ಮುಖ್ಯಮಂತ್ರಿಗಳಾಗಲೂ ಅವಕಾಶ ಮಾಡಿಕೊಟ್ಟವರು. ಅವರ ಜನ್ಮಶತಾಬ್ದಿ ಕಾರ್ಯಕ್ರಮದ ವೇಳೆ ರಸ್ತೆಯ ಮರುನಾಮಕರಣ ಮತ್ತು ಪ್ರತಿಮೆ ನಿರ್ಮಾಣಕ್ಕೆ ಪಕ್ಷಬೇಧ ಮರೆತು ಸಹಯೋಗ ನೀಡಲಾಗಿದೆ. ಅವರ ಸಕ್ರಿಯ ರಾಜಕಾರಣ ದೆಹಲಿಯ ವರೆಗೂ ಬೆಳಗಾವಿಯನ್ನು ಗುರುತಿಸಿತ್ತು. ಅವರ ಉಪಕಾರ ಇಂದಿಗೂ ಹಲವರ ಮೇಲಿದೆ. ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದರು.

ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಬಿ.ಶಂಕರಾನಂದ ಅವರ ವ್ಯಕ್ತಿತ್ವ ಅವರ ಪರಿಚಯ ಇಂದಿಗೂ ಬೆಳಗಾವಿಯ ಹಳ್ಳಿಗಳಿಂದ ದೆಹಲಿಯ ವರೆಗೂ ಹಚ್ಚಹಸಿರಾಗಿದೆ. ಚಿಕ್ಕೋಡಿ ಕ್ಷೇತ್ರವನ್ನು ಇಂದಿಗೂ ಅವರ ಹೆಸರಿನಲ್ಲಿ ದೆಹಲಿಯಲ್ಲಿ ಗುರುತಿಸಲಾಗುತ್ತದೆ ಎಂದರು.

ಇದೇ ವೇಳೆ ಕ್ಲಬ್ ರಸ್ತೆಗೆ ಬಿ.ಶಂಕರಾನಂದ ಮಾರ್ಗವೆಂದು ಮರು ನಾಮಕರಣ ಮಾಡಿ ನಾಮಫಲಕ ಅನಾವರಣಗೊಳಿಸಲಾಯಿತು. ಬಳಿಕ ಬಿ.ಶಂಕರಾನಂದ ಅವರ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಸಮಾರಂಭ ನೆರವೇರಿಸಲಾಯಿತು. ಬಿ.ಶಂಕರಾನಂದ ಅವರ ಪುತ್ರ ಪ್ರದೀಪ ಕಣಗಲಿ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಮಂಗೇಶ ಪವಾರ, ಶಾಸಕ ಆಸೀಫ್ ಸೇಠ್, ಉಪಮೇಯರ್ ವಾಣಿ ಜೋಷಿ, ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಶಾಸಕ ಫಿರೋಜ್ ಸೇಠ್, ಮಾಜಿ ಮೇಯರ್ ಸವಿತಾ ಕಾಂಬಳೆ, ಪಾಲಿಕೆ ಸದಸ್ಯ ಸಂದೀಪ ಜೀರಗ್ಯಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net