ಸನಾತನ ಧರ್ಮ, ಸಂಸ್ಕೃತಿಗೆ ಶಂಕರಾಚಾರ್ಯರ ಕೊಡುಗೆ ಅಪಾರ

3 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತದಲ್ಲಿ ಸನಾತನ ಧರ್ಮ ಉಳಿದು ಬೆಳೆಯಲು ಆದ್ಯ ಜಗದ್ಗುರು ಶ್ರೀ ಶಂಕರಾಚಾರ್ಯರ ಕೊಡುಗೆ ಅಪಾರವಾಗಿದೆ. ಶಂಕರಾಚಾರ್ಯರಿಂದ ನಮ್ಮ ಸನಾತನ ಸಂಸ್ಕೃತಿ, ಧರ್ಮ ಉಳಿದಿದೆ. ಚಿಕ್ಕ ವಯಸ್ಸಿನಲ್ಲಿ ಅಖಂಡ ಭಾರತ ಸುತ್ತಿ, ಧರ್ಮ ಪ್ರಚಾರದ ಮೂಲಕ ಒಂದು ಗೂಡಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹುಡಾ ಅಧ್ಯಕ್ಷ ಶಾಕೀರ್​ ಸನದಿ ಹೇಳಿದರು.

ನಗರದ ಆಲೂರು ವೆಂಕಟರಾವ್​ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ತತ್ವಜ್ಞಾನಿಗಳ ದಿನ ನಿಮಿತ್ತ ಆಯೋಜಿಸಿದ್ದ ಆದ್ಯ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಶ್ರೇಷ್ಠ ಆಧ್ಯಾತ್ಮಿಕ ನಾಯಕರು ಮತ್ತು ತತ್ವಜ್ಞಾನಿಗಳಲ್ಲಿ ಒಬ್ಬರಾದ ಶಂಕರಾಚಾರ್ಯರ ವಿಚಾರಧಾರೆಗಳು, ಸಾಮಾಜಿಕ ಸುಧಾರಣೆ ಮತ್ತು ಧಾರ್ಮಿಕ ಸುಧಾರಣೆಗಳ ತತ್ವಗಳನ್ನು ಭಾರತೀಯರು ಅನುಸರಿಸುವಂತೆ ಮಾಡಿ, ಏಕತೆ ದೃಷ್ಟಿಯಿಂದ ಭಾರತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಅದ್ವೈತ ಸಿದ್ಧಾಂತ ಮತ್ತು ಉಪನಿಷತ್ತಿನ ಅರ್ಥವನ್ನು ದೇಶಾದ್ಯಂತ ಪ್ರಚಾರ ಮಾಡಿದರು. ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಶಾರದಾ ಪೀಠಗಳನ್ನು ಸ್ಥಾಪಿಸಿದವರು. ಇಂತಹ ಮಹಾತ್ಮರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಶಾಲಾ ಪಠ್ಯಗಳ ಮೂಲಕ ತಿಳಿಸುವುದು ಬಹು ಮುಖ್ಯವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹೆಬ್ಬಳ್ಳಿಯ ಶ್ರೀ ಬ್ರಹ್ಮ ಚೈತನ್ಯ ಆಶ್ರಮದ ದತ್ತಾವಧೂತರು ಮಾತನಾಡಿ, ಶ್ರೀ ಶಂಕರಾಚಾರ್ಯರು 8ನೇ ಶತಮಾನದಲ್ಲಿ ಭಾರತದಲ್ಲಿ ಜನಿಸಿದವರು. ಅವರು ಪ್ರಮುಖ ವೇದಾಂತ ತತ್ವಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ಶಂಕರಾಚಾರ್ಯರು ಅದ್ವೈತ ವೇದಾಂತ ತತ್ವವನ್ನು ಬೋಧಿಸಿ, ಏಕಮೇವಾದ್ವೀತಿಯಂ ಎಂಬ ತತ್ವ ಸಾರಿದರು. ಅವರು ಬೋಧಿಸಿದ ತತ್ವವು ಜ್ಞಾನ, ಭಕ್ತಿ ಮತ್ತು ಧ್ಯಾನದ ಮಹತ್ವ ಹೇಳುತ್ತವೆ ಎಂದರು.

ಸಾಹಿತಿ ಡಾ. ಭಾರತಿ ಹೆಗಡೆ ಶಂಕರಾಚಾರ್ಯರ ಕುರಿತು ಉಪನ್ಯಾಸ ನೀಡಿದರು. ಮಾಜಿ ಮೇಯರ್​ ಎಚ್​.ವಿ. ಡಂಬಳ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಆರ್​.ಡಿ.ಕುಲಕರ್ಣಿ, ಡಾ. ದೀಪಕ ಆಲೂರ, ಮಂಜುನಾಥ ಭೋವಿ, ಮಾಜಿ ಮೇಯರ್​ ಪೂರ್ಣಾ ಪಾಟೀಲ, ಇತರರು ಇದ್ದರು.

ಕುಮಾರ ಬೆಕ್ಕೇರಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net