

ಎನ್.ಆರ್.ಪುರ: ವೇದ, ಉಪನಿಷತ್ತು, ಪುರಾಣ ಹಾಗೂ ಮಹಾಕಾವ್ಯಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಆದಿಗುರು ಶಂಕರಾಚಾರ್ಯರು ರಚನೆ ಮಾಡಿದ್ದರು ಎಂದು ಲೇಖಕಿ ಭಾಗ್ಯಾ ನಂಜುಂಡಸ್ವಾಮಿ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಮಂಗಳವಾರ ಶ್ರೀ ಶಂಕರ ಜಯಂತಿ ಹಾಗೂ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶಂಕರಾಚಾರ್ಯರು 8ನೇ ವರ್ಷಕ್ಕೆ 4 ವೇದಗಳನ್ನು ಅಧ್ಯಯನ ಮಾಡಿದ್ದರು. 12ನೇ ವರ್ಷಕ್ಕೆ ಸಕಲ ಶಾಸ್ತ್ರಗಳ ಪಾಂಡಿತ್ಯ ಪಡೆದಿದ್ದರು. 16ನೇ ವರ್ಷಕ್ಕೆ ಭಾಷ್ಯ ರಚನೆ ಮಾಡಿದರು. 32ನೇ ವರ್ಷಕ್ಕೆ ದೇಹತ್ಯಾಗ ಮಾಡಿದರು. ಅವರು 54 ಗ್ರಂಥಗಳು, 10 ಉಪನಿಷತ್ತುಗಳು, 72 ಸ್ತೋತ್ರಗಳನ್ನು ರಚಿಸಿದ್ದಾರೆ. ಕಾಲಬೈರವಾಷ್ಟಕ, ಕನಕದಾಸ ಸ್ತೋತ್ರ, ಸೌಂದರ್ಯ ಲಹರಿ ರಚಿಸಿ ದೇವಿಯನ್ನು ಆರಾಧಿಸಿದ್ದಾರೆ. ಶೃಂಗೇರಿ ಶಾರದಾ ಪೀಠ, ಪುರಿಯ ಗೋವರ್ಧನ ಪೀಠ, ದ್ವಾರಕೆಯ ಕಾಳಿಕಾ ಪೀಠ, ಬದರಿಯಲ್ಲಿ ಜ್ಯೋತಿರ್ಮಠ ಸ್ಥಾಪಿಸಿ 4 ದಿಕ್ಕಿನಲ್ಲೂ ಅದ್ವೈತ ಸಿದ್ಧಾಂತ ಪ್ರತಿಪಾದಿಸಿದ್ದಾರೆ ಎಂದರು.
ತಹಸೀಲ್ದಾರ್ ರಮೇಶ್, ಚುನಾವಣಾ ಶಿರಸ್ತೇದಾರ್ ಮಹಮ್ಮದ್ ಇಫ್ತಿಕರ್, ಶಿರಸ್ತೇದಾರ್ ಹೇಮಾ, ಡಿಎಸ್‌ಎಸ್ ಮುಖಂಡ ಡಿ.ರಾಮು, ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ್, ಕಂದಾಯ ನಿರೀಕ್ಷಕ ಮಂಜುನಾಥ್ ಇತರರಿದ್ದರು.