

ಸಕಲೇಶಪುರ: ಶಂಕರಾಚಾರ್ಯರು 32 ವರ್ಷಗಳಷ್ಟೇ ಬದುಕಿದ್ದರು. ಆದರೆ ಅವರ ಜೀವಿತಾವಧಿಯಲ್ಲಿ ಅನೇಕ ಮಹಾನ್ ಗ್ರಂಥಗಳನ್ನು ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ತಾಲೂಕು ಬ್ರಾಹ್ಮಣ ಸಮಾಜದ ಕಾರ್ಯದರ್ಶಿ ಶಿವಶಂಕರ್ ಅಭಿಪ್ರಾಯಪಟ್ಟರು.
ತಾಲೂಕು ಬ್ರಾಹ್ಮಣ ಸಮಾಜದ ವತಿಯಿಂದ ಭಾನುವಾರ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಎಂಟನೇ ವಯಸ್ಸಿನಲ್ಲಿಯೇ ಸನ್ಯಾಸತ್ವ ಸ್ವೀಕರಿಸಿದ ಶಂಕರಾಚಾರ್ಯರು ಹಿಂದು ಧರ್ಮದ ಪ್ರಚಾರಕ್ಕಾಗಿ ದೇಶದ ವಿವಿಧೆಡೆ ಸಂಚರಿಸಿ ನಾಲ್ಕು ಮಠಗಳನ್ನು ಸ್ಥಾಪಿಸಿದ್ದಾರೆ. ವೇದಗಳ ಮೂಲಕ ಪರಮಾತ್ಮನ ಸಾನ್ನಿಧ್ಯ ಸಾಧ್ಯ ಎಂಬುದನ್ನು ಸಾಬೀತುಪಡಿಸಿದರು ಎಂದರು.
ಶಂಕರಚಾರ್ಯರ ಸೌಂದರ್ಯ ಲಹರಿ ಉತ್ತಮ ಗ್ರಂಥಗಳಲ್ಲಿ ಒಂದಾಗಿದೆ. ಈ ಕೃತಿ ಯಾವುದೇ ಒಂದು ಜಾತಿಗೆ ಸೀಮಿತವಾಗದೆ ಎಲ್ಲ ಮನೆಗಳಲ್ಲಿ ಮಹಿಳೆಯರು ಪಠಿಸುತ್ತಿದ್ದಾರೆ. ಶಂಕರಾಚಾರ್ಯರ ಅದೈತ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ವಿಪ್ರ ಮಹಿಳಾ ಮಂಡಳಿಯಿಂದ ಶಂಕರರ ಪಾರಾಯಣ ಮಾಡಲಾಯಿತು. ನಂತರ ಬ್ರಾಹ್ಮಣರ ಬೀದಿಯಲ್ಲಿ ಶಂಕರಚಾರ್ಯರ ‘ಾವಚಿತ್ರದೊಂದಿಗೆ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮವಾದ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.
ಬ್ರಾಹ್ಮಣ ಸಮಾಜದ ಬಹುತೇಕ ಮುಖಂಡರು ಹಾಗೂ ವಿಪ್ರ ಮಹಿಳಾ ಮಂಡಳಿಯ ಸದಸ್ಯರು ಹಾಜರಿದ್ದರು.