ಶಂಕರಾಚಾರ್ಯರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

28-klr-4
Published on

ಕೋಲಾರ: ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶಂಕರಾಚಾರ್ಯರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿ, ಸರ್ಕಾರದಿಂದ ಹಲವರ ಜಯಂತಿಗಳನ್ನು ಆಚರಿಸುತ್ತಿದ್ದು, ಅಂತಹವರಲ್ಲಿ ಶಂಕರಾಚಾರ್ಯರೂ ಒಬ್ಬರು. ದೇವರು ಎಲ್ಲೂ ಇಲ್ಲ ನಮ್ಮೊಳಗೆ ಇದ್ದಾನೆ. ಅಹಂ ಬ್ರಹ್ಮಾಸ್ಮಿ ಎಂದು ಪ್ರತಿಪಾದಿಸಿದ ಶಂಕರಾಚಾರ್ಯರು ಹಲವು ಮಠಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಕರ್ನಾಟಕದ ಶೃಂಗೇರಿ ಶಾರದಾ ಪೀಠವೂ ಒಂದಾಗಿದೆ ಎಂದು ನುಡಿದರು.

ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜು ಮಾತನಾಡಿ, ಭಾರತ ದೇಶ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಹಿಂದು ಧರ್ಮದಲ್ಲಿದ್ದ ಮೂಡನಂಬಿಕೆ ಹಾಗೂ ಕಠಿಣ ಪದ್ಧತಿಗಳನ್ನು ವಿರೋಧಿಸಿ ಜೈನ ಮತ್ತು ಬೌದ್ಧ ಧರ್ಮಗಳು ಸ್ಥಾಪನೆಯಾದವು. ಹಿಂದು ಧರ್ಮದ ಕಠಿಣ ಆಚರಣೆಗಳನ್ನು ಸರಳತೆಗೆ ತಂದರು. ಇವರು ಭಾರತ ದೇಶವನ್ನು ಮೂರು ಬಾರಿ ಪ್ರವಾಸ ಮಾಡಿ ಅಗಾದ ಪಾಂಡಿತ್ಯವನ್ನು ಜನರಿಗೆ ತಿಳಿಸಿದರು. ಆತ್ಮ ಮತ್ತು ಪರಮಾತ್ಮ ಎರಡು ಒಂದೇ ಎಂಬ ಸಂದೇಶ ನೀಡಿದರು ಎಂದರು.

ಸಮುದಾಯದ ಮುಖಂಡ ರಾಮಕೃಷ್ಣ ಮಾತನಾಡಿ, ಶಂಕರಚಾರ್ಯರು ತಮ್ಮ ಕಾಲದಲ್ಲಿ ಸಮಾಜದ ಪಿಡುಗುಗಳನ್ನು ಹೋಗಲಾಡಿಸಿದರು. ಇವರು ಅವಿದ್ಯೆಯನ್ನು ನಾಶ ಮಾಡಿ ಜ್ಞಾನದ ಬೆಳಕು ಚೆಲ್ಲಿದರು. ಎಲ್ಲರೊಂದಿಗೆ ಕೂಡಿ ಸಹಬಾಳ್ವೆಯಿಂದ ಜೀವನ ನಡೆಸಬೇಕೆಂದು ಜನರಿಗೆ ತಿಳಿವಳಿಕೆ ನೀಡಿದರು ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಆರ್.ಜ್ಞಾನಮೂರ್ತಿ ಮಾತನಾಡಿ, ಬೌದ್ಧ ಧರ್ಮವು ಪ್ರಾಶಸ್ತ್ಯವನ್ನು ಕಳೆದುಕೊಳ್ಳುವ ಸಮಯದಲ್ಲಿ ಶಂಕರಾಚಾರ್ಯರು ತಮ್ಮ ತತ್ವಗಳನ್ನು ಪ್ರತಿಪಾದಿಸಿ ಜನರಲ್ಲಿ ಅರಿವು ಮೂಡಿಸಿದರು. ಜೀವರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವಾದುದು. ಇದರ ಸಾರ್ಥಕತೆ ಪಡೆಯಲು ಮುಕ್ತಿ ಪಡೆದುಕೊಳ್ಳಬೇಕು ಎಂದು ಪ್ರತಿಪಾದಿಸಿದರು ಎಂದು ಮಾಹಿತಿ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net