ಶಂಕರ ಭಾಗವತ ಯಲ್ಲಾಪುರಗೆ ಕಾಳಿಂಗ ನಾವಡ ಪ್ರಶಸ್ತಿ

prasahsthi web
Published on

ಕೋಟ: ಯಕ್ಷಗಾನದಲ್ಲಿ ಕರಾವಳಿ ಗಾನ ಕೋಗಿಲೆ ಖ್ಯಾತಿಯ ಕಾಳಿಂಗ ನಾವಡ ಹಾಗೂ ಅವರ ಸಿರಿ ಕಂಠದ ನೆನಪಿನಲ್ಲಿ ಬೆಂಗಳೂರಿನ ಕಲಾಕದಂಬ ಆರ್ಟ್ಸ್ ಸೆಂಟರ್ ನೀಡುತ್ತಿರುವ 2021ನೇ ಸಾಲಿನ ಕಾಳಿಂಗ ನಾವಡ ಪ್ರಶಸ್ತಿಗೆ ಯಕ್ಷಗಾನ ಕ್ಷೇತ್ರದ ಹಿರಿಯ ಅನುಭವಿ, ಮದ್ದಳೆ ಮಾಂತ್ರಿಕ ಕ್ರಿಯಾಶೀಲ ಕಲಾವಿದ ಶಂಕರ ಭಾಗವತ ಯಲ್ಲಾಪುರ ಅವರನ್ನು ಆಯ್ಕೆ ಮಾಡಲಾಗಿದೆ.
ಅ.1ರಂದು ಸಾಯಂಕಾಲ 4ಕ್ಕೆ ಬೆಂಗಳೂರಿನ ಬಸವನಗುಡಿಯ ಗವಿಪುರಂನಲ್ಲಿರುವ ಉದಯಭಾನು ಕಲಾಮಂದಿರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿಯು ಸನ್ಮಾನ ಪತ್ರ, ಫಲಕ, ಬೆಳ್ಳಿ ತಟ್ಟೆ ಸೇರಿದಂತೆ ಹತ್ತು ಸಾವಿರ ರೂಪಾಯಿ ನಗದು ಒಳಗೊಂಡಿರುತ್ತದೆ.

ಸಂಸ್ಥೆ ಕಳೆದ 11 ವರ್ಷಗಳಿಂದ ಕಾಳಿಂಗ ನಾವಡ ಪ್ರಶಸ್ತಿಯನ್ನು ಯಕ್ಷಲೋಕದ ಹಿಮ್ಮೇಳ ಕಲಾವಿದರಿಗೆ ನೀಡುತ್ತಾ ಬಂದಿದೆ. ಅಂಬರೀಷ್ ಭಟ್, ದೇವರಾಜ ಕರಬ, ವಿಶ್ವನಾಥ ಉರಾಳ, ಮಮತಾ ಆರ್.ಕೆ., ಮುರಳೀಧರ ನಾವಡ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು ಎಂದು ಸಂಸ್ಥೆಯ ನಿರ್ದೇಶಕ ಡಾ. ರಾಧಾಕೃಷ್ಣ ಉರಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net