

ಮಡಿಕೇರಿ:
ಆದಿ ಶಂಕರಾಚಾರ್ಯರು ಕೇರಳದ ಕಾಲಡಿಯ ಪೂರ್ಣ ನದಿ ತೀರದಲ್ಲಿ ಒಂದು ಸರಳವಾದ ಕುಟುಂಬದಲ್ಲಿ ಹುಟ್ಟಿದ ಸಾಮಾನ್ಯ ಶಿಶು ಹಾಗೂ ಅವರು ಸೌಂದರ್ಯ ಲಹರಿಯಲ್ಲಿ ದ್ರಾವಿಡ ಶಿಶು ಎಂದು ಕರೆದುಕೊಳ್ಳುತ್ತಾರೆ ಎಂದು ಆಧ್ಯಾತ್ಮಿಕ ಚಿಂತಕ ಯಸಳೂರು ಉದಯ್ ಕುಮಾರ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ನಗರದ ಗಾಂಧಿ ಭವನದಲ್ಲಿ ನಡೆದ ಶ್ರೀ ಆದಿ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಂಗಾರದ ಕ್ರಾಂತಿ ಹಾಗೂ ವರ್ಣವನ್ನು ನೀಗಿಸುವ ಪಾಷಾ ಅಂಕುಶ ಬಾಣ ಬಿಲ್ಲುಗಳನ್ನು ಧರಿಸಿದ್ದ ಕೆಂಪು ಹೂಮಾಲೆ ಧರಿಸಿದ್ದ ಕೆಂಪಡರಿದ ಕಣ್ಣುಗಳ ತಾಂಬೂಲಗಳಿAದ ಕೆಂಪಾದ ವದನವುಳ್ಳ ತ್ರಿಪುರ ಸುಂದರಿ ಮಹಾದೇವಿಯನ್ನು ಭಕ್ತಿಯಿಂದ ನಮಿಸುವೆ ಎಂದು ಸೌಂದರ್ಯ ಲಹರಿಯಲ್ಲಿ ಶಂಕರಾಚಾರ್ಯರು ಹೇಳಿದ್ದಾರೆ. ಆದಿ ರಂಗ, ಮಧ್ಯ ರಂಗ, ಅಂತರAಗ ಮೂರು ರಂಗನಾಥಗಳಿವೆ, ಕಾವೇರಿಯನ್ನು ಫಲವನ್ನು ಮತ್ತು ಬೆಳಕನ್ನು ಕೊಡುವ ಮಹಾತಾಯಿ ಎಂದು ಹೇಳುತ್ತಾರೆ. ಫಲ ಎಂದರೆ ಅನ್ನ ಇಡೀ ಕರ್ನಾಟಕ ತಮಿಳುನಾಡಿನಲ್ಲಿ ಕಾವೇರಿ ತಾನು ಹರಿದು ಕಡಲನ್ನು ಸೇರುವವರೆಗೆ ಹನಿ ಹನಿ ನೀರಿಗೆ ತೆನೆ ತೆನೆ ಭತ್ತವನ್ನು ಬೆಳೆಯುತ್ತಾರೆ. ಆ ಅನ್ನವನ್ನು ತಿಂದವರು ಬಲವನ್ನು ಬೆಳೆಸುತ್ತಾರೆ ಎಂದರು.
ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ ಶಂಕರಾಚಾರ್ಯರ ಬೋಧನೆಯ ಅಂಶವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಅದಕ್ಕೆ ಸಾರ್ಥಕತೆ ಇರುತ್ತದೆ. ವ್ಯಕ್ತಿಯಾಗಿ ವ್ಯಕ್ತಿತ್ವವನ್ನು ಇಟ್ಟುಕೊಂಡು ಜೀವನ ನಡೆಸಬೇಕು ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಅವರು ಮಾತನಾಡಿ ವಿದ್ಯಾರ್ಥಿಗಳು ಪಾಠದ ಜತೆಗೆ ಪಠ್ಯೇತರ ವಿಷಯಗಳಲ್ಲಿ ಮತ್ತು ಆಧ್ಯಾತಿಕತೆಯಲ್ಲಿ ಸಹ ತೊಡಗಿಸಿಕೊಳ್ಳಬೇಕು. ಆದಿ ಶಂಕರಾಚಾರ್ಯರು 8ನೇ ಶತಮಾನದಲ್ಲಿ ಜೀವಿಸಿದಂತಹ ಅತ್ಯಂತ ಪ್ರಸಿದ್ಧವಾದಂತಹ ಒಬ್ಬ ತತ್ವಜ್ಞಾನಿ. ಇವರು ಕೇರಳ ಪ್ರಾಂತ್ಯದಲ್ಲಿದ್ದವರು ಎಂದು ಹೇಳಿದರು.
ಮಡಿಕೇರಿ ಬ್ರಾಹ್ಮಣ ಸಮಾಜದ ಎಸ್.ಎಸ್. ಸಂಪತ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಇತರರು ಪಾಲ್ಗೊಂಡಿದ್ದರು.