ಶ್ರೀಶಂಕರ ಮಹಾಪಾದುಕೆ ರಥ ಆಗಮನ

Published on

ಹುಬ್ಬಳ್ಳಿ: ಶ್ರೀ ಶಂಕರಾಚಾರ್ಯರ ಜನ್ಮಸ್ಥಳ ಕಾಲಟಿಯಿಂದ ಶ್ರೀ ಶಂಕರರ ಮಹಾಪಾದುಕೆ ಹೊತ್ತ ಅದ್ವೈತ ರಥವು ಮಾ. 27ರಂದು ನಗರಕ್ಕೆ ಆಗಮಿಸಲಿದ್ದು, ಭವ್ಯ ಸ್ವಾಗತಕ್ಕೆ ಸಿದ್ಧತೆಗಳು ನಡೆದಿವೆ.

ಸಿದ್ದಾಪುರ ತಾಲೂಕಿನ ಭಾನ್ಕುಳಿ (ಗೋಸ್ವರ್ಗ) ದೇವಸ್ಥಾನದಲ್ಲಿ ಮೇ 1ರಿಂದ ಶ್ರೀ ಶಂಕರ ಪಂಚಮಿ ಕಾರ್ಯಕ್ರಮವು ಶ್ರೀರಾಮಚಂದ್ರಪುರ ಮಠದ ಆಯೋಜನೆಯಲ್ಲಿ ನಡೆಯಲಿದೆ.

ಇದರಂಗವಾಗಿ ಶ್ರೀಶಂಕರರ ತತ್ವ ಸಾರುತ್ತ ಶಂಕರ ಪಂಚಮಿ ಕಾರ್ಯಕ್ರಮಕ್ಕೆ ರಥವನ್ನು ಆಹ್ವಾನಿಸಲಾಗುತ್ತಿದೆ. ಮಾ. 27ರಂದು ಮಧ್ಯಾಹ್ನ 1ಕ್ಕೆ ದಾವಣಗೆರೆಯಿಂದ ಹುಬ್ಬಳ್ಳಿಗೆ ರಥ ಆಗಮಿಸಲಿದೆ.

ನಗರದ ಲೂತಿಮಠ ಲೇಔಟ್ ನಲ್ಲಿರುವ ಹವ್ಯಕ ಭವನಕ್ಕೆ ರಥ ಆಗಮಿಸಲಿದ್ದು, ಸಂಜೆ 7ಕ್ಕೆ ಗೋಕುಲದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಸಾಗಲಿದೆ.

ಮಾ. 28ರಂದು ಬೆಳಗ್ಗೆ 7.30ಕ್ಕೆ ಹೊರಟು ಧಾರವಾಡ ಕೆಲಗೇರಿ ರಸ್ತೆಯಲ್ಲಿನ ಸಂಪಿಗೆನಗರ ಕ್ರಾಸ್ ನಿಂದ ಗಣಪತಿ ದೇವಸ್ಥಾನದ ವರೆಗೆ ಮೆರವಣಿಗೆ ಸಾಗಲಿದೆ. ಕಾರ್ಯಕ್ರಮದ ನಂತರ ಕೆಲಗೇರಿ ಮಾರ್ಗವಾಗಿ ಯಲ್ಲಾಪುರಕ್ಕೆ ಪ್ರಯಾಣ ಬೆಳೆಸಲಿದೆ.

ಶ್ರೀ ಶಂಕರ ಭಕ್ತರು ಪಾಲ್ಗೊಳ್ಳಬೇಕೆಂದು ಹುಬ್ಬಳ್ಳಿ ಧಾರವಾಡ ಹಾವೇರಿ ವಲಯ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net