

ಹುಬ್ಬಳ್ಳಿ: ಸರ್ವರಿಗೂ ಕಲ್ಯಾಣ ಮಾಡುವವನೇ ಶಂಕರ. ವೇದ ಸಂಸತಿಯನ್ನು ವಿಶ್ವಕ್ಕೆ ನೀಡಿದ ಶ್ರೀ ಶಂಕರರ ತತ್ವಗಳು ಇಂದಿಗೂ ಪ್ರಸ್ತುತ ಎಂದು ವೇದಮೂರ್ತಿ ಡಾ. ಮಹೇಶ ಹಂಪಿಹೊಳಿ ಹೇಳಿದರು.
ಇಲ್ಲಿಯ ನವನಗರದ ಶಿವರಾತ್ರಿ ಜಾಗರಣೋತ್ಸವ ಸಮಿತಿ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.
ಶಂಕರರು ಎಳೆಯ ವಯಸ್ಸಿನಲ್ಲಿಯೇ ವೇದಾಧ್ಯಯನ ಮಾಡಿ ಪ್ರಸಿದ್ಧರಾದರು. ಒಬ್ಬ ಬಡ ವಿಧವೆ ಮನೆಗೆ ಹೋಗಿ ಭಿಕ್ಷೆ ಬೇಡಲು ಅವಳ ಮನೆಯಲ್ಲಿ ಏನೂ ಇಲ್ಲವಾದ್ದರಿಂದ ಅವಳು ಒಣಗಿದ ಒಂದು ನೆಲ್ಲಿಕಾಯಿಯನ್ನು ಭಿಕ್ಷೆ ಹಾಕುತ್ತಾಳೆ. ಅದರಿಂದ ಸಂತುಷ್ಟರಾಗಿ ಅಲ್ಲಿಯೇ ಕನಕಧಾರಾ ಸ್ತ್ತೋತ್ರ ರಚಿಸುತ್ತಾರೆ. ಆ ಮನೆಯನ್ನು ಈಗಲೂ ಕಾಲಟಿಯಲ್ಲಿ ನೋಡಬಹುದು ಎಂದರು.
ಶ್ರೀ ಗೋವಿಂದ ಭಗವತ್ಪಾದರ ಶಿಷ್ಯತ್ವ ಹೊಂದಿ ಸನ್ಯಾಸ ಸ್ವೀಕರಿಸಿದರು. ಜಾತಿ, ಮತ, ಪಂಥ ಭೇದವಿಲ್ಲದೆ ಸರ್ವರಿಗೂ ಮಾರ್ಗದರ್ಶನ ಮಾಡಿ ಉದ್ಧರಿಸುತ್ತಾರೆ. ಪ್ರಸ್ಥಾನ ತ್ರಯಗಳಿಗೆ ಭಾಷ್ಯ ಬರೆದ ಪ್ರಥಮ ಯತಿಗಳು ಇವರು.
ದೇಶದಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿ ತಮ್ಮ ನಾಲ್ಕು ಜನ ಪ್ರಮುಖ ಶಿಷ್ಯರನ್ನು ಪೀಠಾಧಿಪತಿಗಳನ್ನಾಗಿ ನಿಯಮಿಸಿ ನಿತ್ಯ ನೈಮಿತ್ತಿಕ ಉಪಾಸನೆ ಪೂಜೆ ನಡೆಯುವಂತೆ ವ್ಯವಸ್ಥೆ ಮಾಡಿದರು ಎಂದರು.
ಮಾರ್ತಾಂಡ ನಾಡಿಗೇರ ಅಧ್ಯಕ್ಷತೆ ವಹಿಸಿದ್ದರು. ಆರ್.ಎಸ್. ಕುಲಕರ್ಣಿ ಹಾಗೂ ವಸಂತ ಪಾಗೆ ದಂಪತಿಗಳು ಅತಿಥಿ ಹಾಗೂ ದಾನಿಗಳ ಸನ್ಮಾನ ಮಾಡಿದರು. ಗಿರಿಜಾ ಭಜನಾ ಮಂಡಳಿಯಿಂದ ಭಜನೆ, ವೈದಿಕ ವೃಂದದಿಂದ ಅಭಿಷೇಕ ಪೂಜೆ ಜರುಗಿತು.
ಅಶೋಕ ಶೇಡಬಾಳ ಪ್ರಾರ್ಥನೆ ಹಾಡಿದರು. ರಮೇಶ್ ಕುಲಕರ್ಣಿ ಸ್ವಾಗತಿಸಿದರು. ದತ್ತಾತ್ರೇಯ ನಾಡಿಗೇರ ಪರಿಚಯಿಸಿದರು.