

ಮಾಲಂಬಿ ದಿನೇಶ್ ಶನಿವಾರಸಂತೆ
ಶನಿವಾರಸಂತೆ ಹೋಬಳಿ ಕೇಂದ್ರವಾಗಿದ್ದರೂ ಇತರೆ ಗ್ರಾಮ ಪಂಚಾಯಿತಿಗೆ ಬರುವಷ್ಟು ಅನುದಾನ ಬಾರದರಿಂದ ನಿರೀಕ್ಷಿತ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿಲ್ಲ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಕೂಡ ಅಭಿವೃದ್ಧಿಗೆ ತೊಡಕಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.
ರಾಜ್ಯದ ನಂಬರ್ ೧ ಕನ್ನಡ ದಿನಪತ್ರಿಕೆ ವಿಜಯವಾಣಿ ಶನಿವಾರಸಂತೆ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಕ್ಷೇತ್ರ ದರ್ಶನದಲ್ಲಿ ಕುಂದುಕೊರತೆ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ಗಮನ ಸೆಳೆದಿದ್ದಾರೆ. ಗ್ರಾಪಂ ಅಧ್ಯಕ್ಷೆ ಪರ್ಜಾನಾ ಬಾನು, ಉಪಾಧ್ಯಕ್ಷ ಮಧು, ಸದಸ್ಯರಾದ ಶರತ್‌ಶೇಖರ್, ಎಸ್.ಎನ್. ರಘು, ಸರ್ದಾರ್ ಅಹಮ್ಮದ್, ಆದಿತ್ಯಗೌಡ, ಸರೋಜಾ ಶೇಖರ್, ಗೀತಾ ಹರೀಶ್, ಸರಸ್ವತಿ, ಕಾವೇರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಸ್ ನಿಲ್ದಾಣ ಇಲ್ಲದಿರುವುದು, ಆರೋಗ್ಯ ಕೇಂದ್ರಕ್ಕೆ ಅಗತ್ಯ ವೈದ್ಯರ ನೇಮಕ ಮಾಡದಿರುವುದು, ಕಸ ವಿಲೇವಾರಿಗೆ ಸೂಕ್ತ ಸ್ಥಳ ಗುರುತಿಸದಿ ರುವುದು, ಪ್ರಾಪರ್ಟಿ ಕಾರ್ಡ್ ಸರಿಯಗಿ ವಿತರಣೆಯಾಗದಿರುವುದು, ಸಂತೆ ಮಾರುಕಟ್ಟೆ ಅಭಿವೃದ್ಧಿ ಆಗದಿರುವುದು ಇಲ್ಲಿನ ಪ್ರಮುಖ ಸಮಸ್ಯೆಯಾಗಿದೆ.
ಇಲ್ಲಿ ಶನಿವಾರ ವಾರದ ಸಂತೆ ನಡೆಯುತ್ತದೆ. ಮಳೆಗಾಲದಲ್ಲಿ ವ್ಯಾಪರಸ್ಥರ ಹಾಗೂ ಗ್ರಾಹಕರ ಗೋಳು ಹೇಳತೀರದು. ಕೊಳಚೆ ನೀರಿನಲ್ಲೆ ಕುಳಿತು ವ್ಯಾಪಾರ ಮಾಡಬೇಕಾಗಿದೆ. ಹಸಿಮೆಣಸು, ಶುಂಠಿ, ಬಾಳೆಕಾಯಿ, ನಿಂಬೆ ಹಣ್ಣು, ತರಕಾರಿಯನ್ನು ರೈತರು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ. ಜಿಲ್ಲೆಯಲ್ಲೆ ಅತಿ ದೊಡ್ಡ ಸಂತೆ ಮಾರುಕಟ್ಟೆಯಾಗಿದ್ದರೂ, ಅಭಿವೃದ್ಧಿ ಮಾತ್ರ ಆಗಿಲ್ಲ ಎಂದು ವರ್ತಕರಾದ ಹರೀಶ್, ಮಧು ಬೇಸರ ವ್ಯಕ್ತ ಪಡಿಸುತ್ತಾರೆ.
ಮಾರುಕಟ್ಟೆ ಅವ್ಯವಸ್ಥೆಯಿಂದ ಕೃಷಿಕರು ತೊಂದರೆ ಅನುಭಸುವಂತಾಗಿದೆ. ಇಂದಿಗೂ ವ್ಯಾಪಾರಸ್ಥರು ಮಣ್ಣಿನ ನೆಲದಲ್ಲಿ ಗೋಣಿ ಚೀಲ ಹಾಸಿಕೊಂಡು ವ್ಯಾಪಾರ ನಡೆಸುತಿದ್ದಾರೆ. ಇದಕ್ಕೆ ಯಾರನ್ನು ದೂರುವುದು ಎಂದು ತಿಳಿಯುತಿಲ್ಲ. ಮಾರುಕಟ್ಟೆ ಅಭಿವೃದ್ಧಿಗೆ ಹೆಚ್ಚು ಅನುದಾನ ಬೇಕಾಗಿದೆ ಎಂದು ಗ್ರಾಪಂ ಸದಸ್ಯ ಸರ್ದಾರ್ ಆಹಮ್ಮದ್ ಹೇಳುತ್ತಾರೆ.
ಹೋಬಳಿ ಕೇಂದ್ರವಾಗಿರುವುದರಿಂದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ೬ ವೈದ್ಯರು ಸೇವೆ ಸಲ್ಲಿಸಬೇಕು. ಆದರೆ, ಇಲ್ಲಿರುವುದು ಕೇವಲ ಇಬ್ಬರು ವೈದ್ಯರು. ಇವರೂ ಕೂಡ ವಾರಕ್ಕೆ ಮೂರು ದಿನ ಮಾತ್ರ ಇಲ್ಲಿ ಸೇವೆ ಸಲ್ಲಿಸುತ್ತಾರೆ. ಹಾಸನ ಜಿಲ್ಲೆಗೆ ಹೊಂದಿಕೊಂಡಿರುವು ದರಿಂದ ೪೦ ಹಳ್ಳಿ ಜನ ಈ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆಂದು ಸ್ಥಳೀಯರಾದ ಆದಿಲ್ ಪಾಷ ಹೇಳುತ್ತಾರೆ.
ವೈದ್ಯರ ಸಮಸ್ಯೆ ಬಗ್ಗೆ ಸಂಬಂಧಿಸಿದವರ ಗಮನ ಸೆಳೆದಿದ್ದರೂ ಪ್ರಯೋಜನವಗಿಲ್ಲ. ಹೆಚ್ಚಿನ ಚಿಕಿತ್ಸೆಗೆ ಹಾಸನ, ಮಡಿಕೇರಿಗೆ ತೆರಳಬೇಕಾಗಿದೆ. ಅಧಿಕಾರಿಗಳು ಮಾಡುವ ತಪ್ಪಿಗೆ ನಾವು ಜನರ ಮುಂದೆ ತಲೆತಗ್ಗಿಸುವಂತಾಗಿದೆ ಎಂದು ಗ್ರಾಪಂ ಸದಸ್ಯ ಆದಿತ್ಯ ಗೌಡ ಬೇಸರ ವ್ಯಕ್ತ ಪಡಿಸಿದ್ದಾರೆ.
ಹಾಸನ, ಮಂಗಳೂರು, ಬೆಂಗಳೂರು, ಮೈಸೂರು, ಶಿವಮೊಗ್ಗ, ದಾವಣಗೆರೆ, ಧರ್ಮಸ್ಥಳ ಸೇರಿದಂತೆ ವಿವಿಧೆಡೆಗೆ ಶನಿವಾರಸಂತೆ ಮೂಲಕ ಕೆಎಸ್‌ಆರ್‌ಟಿಸಿ ಬಸ್ ತೆರಳುತ್ತದೆ. ಜಿಲ್ಲೆಯ ವಿವಿಧೆಡೆಗೆ ಖಾಸಗಿ ಬಸ್ ತೆರಳುತ್ತವೆ. ಬಸ್ ನಿಲ್ದಾಣ ಇಲ್ಲದರಿಂದ ಹೋಟೆಲ್, ಅಂಗಡಿ- ಮುಂಗಟ್ಟು ಮುಂದೆ ಪ್ರಯಾಣಿಕರು ನಿಲ್ಲುವಂತಾಗಿದೆ ಎಂದು ಗ್ರಾಪ ಉಪಾಧ್ಯಕ್ಷ ಮಧು, ಸದಸ್ಯರಾದ ಸರೋಜಾ ಶೇಖರ್, ಎಸ್.ಸಿ. ಶರತ್‌ಶೇಖರ್, ಎಸ್.ಎನ್. ರಘು ಹೇಳಿದರು.
ಕಸ ವಿಲೇವಾರಿ ಸಮಸ್ಯೆ ಅನೇಕ ವರ್ಷದಿಂದ ಉಳಿದಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಹಾಕುತ್ತಿರುವುದರಿಂದ ಜನರಿಗೆ ತೊಂದರೆಯಾಗಿದೆ. ಶನಿವಾರಸಂತೆಗೆ ಆಗಮಿಸುವವರನ್ನು ಕಸದ ರಾಶಿ ಸ್ವಾಗತಿಸುವಂತೆ ರಸ್ತೆ ಬದಿ ಶೇಖರಣೆಗೊಂಡಿದೆ. ಇದರೊಂದಿಗೆ ಬೀದಿ ನಾಯಿ ಹಾವಳಿಯೂ ಹೆಚ್ಚಾಗಿದೆ ಎನ್ನುತ್ತಾರೆ ವರ್ತಕ ಸಾದಿಕ್. ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ ಕಾಣಿಸಲು ಗಮನ ಹರಿಸಲಾಗುವುದೆಂದು ಅಧ್ಯಕ್ಷೆ ಪರ್ಜಾನಾ ಬಾನು ಹೇಳುತ್ತಾರೆ.
ಕೆಲವು ರಸ್ತೆಗಳು ಗುಂಡಿ ಬಿದ್ದಿವೆ. ಐಬಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಓಡಾಡಲು ತೊಂದರೆಯಾಗುತಿದೆ. ಕೆಸರುಮಯ ರಸ್ತೆಯಲ್ಲಿ ನಡೆದಾಡುವುದು ವಿದ್ಯಾರ್ಥಿಗಳಿಗೆ ನರಕಯಾತನೆ ನೀಡುತ್ತಿದೆ. ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕೆಂದು ಸ್ಥಳೀಯರಾದ ಭಾಸ್ಕರ್ ಒತ್ತಾಯಿಸಿದ್ದಾರೆ.
ಪ್ರತಿವರ್ಷ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಳಸಲಾಗುತ್ತಿದೆ. ಹೀಗಿದ್ದರೂ, ಪ್ರಯೋಜನಕ್ಕೆ ಬರುತ್ತಿಲ್ಲ. ಇದಕ್ಕೆ ಯಾರನ್ನು ದೂರ ಬೇಕೆಂದು ಗೊತ್ತಾಗುತ್ತಿಲ್ಲ ಎಂದು ಗ್ರಾಪಂ ಸದಸ್ಯರಾದ ಸರ್ದಾರ್ ಅಹಮ್ಮದ್, ಗೀತಾ ಹರೀಶ್ ಹೇಳುತ್ತಾರೆ.
**
ಶನಿವಾರಸಂತೆಯನ್ನು ಸಮಗ್ರ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಂತಹಂತವಾಗಿ ಸಮಸ್ಯೆ ಬಗೆಹರಿಸಲಾಗುವುದು. ಶೀಘ್ರ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಪರ್ಜಾನ ಶಾಹಿದ್ ಬಾನು, ಅಧ್ಯಕ್ಷೆ, ಶನಿವಾರಸಂತೆ ಗ್ರಾಪಂ.
**
ಶನಿವಾರಸಂತೆಗೆ ಅತ್ಯಗತ್ಯವಾಗಿ ಬೇಕಾದ ಬಸ್ ನಿಲ್ದಾಣ ಸ್ಥಾಪನೆ ಬಗ್ಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ಸದಸ್ಯರ ನಿಯೋಗ ಮನವಿ ಸಲ್ಲಿಸಿದೆ. ಡಿಸಿ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಬಸ್ಸ ನಿಲ್ದಾಣ ನಿರ್ಮಾಣವಾಗಲಿದೆ. ಎಸ್. ಎನ್. ರಘು, ಸದಸ್ಯರು, ಶನಿವಾರಸಂತೆ ಗ್ರಾಪಂ.
**
ಶನಿವಾರಸಂತೆ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿರುವ ಅನೇಕ ಸಮಸ್ಯೆಗಳಿಗೆ ಕೆಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಕಾರಣವಾಗಿದೆ. ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದಲ್ಲಿ ಅಗತ್ಯ ಅಭಿವೃದ್ಧಿ ಕಾರ್ಯ ಮಾಡಬಹುದಾಗಿದೆ. ಸಂತೆ ಮಾರುಕಟ್ಟೆಯಲ್ಲಿ ಇಂದಿಗೂ ನೆಲದಲ್ಲಿ ಕುಳಿತು ವ್ಯಾಪಾರ ಮಾಡುವ ಪರಿಸ್ಥಿತಿ ಇದೆ. ಸರ್ದಾರ್ ಅಹಮ್ಮದ್, ಸದಸ್ಯರು, ಶನಿವಾರಸಂತೆ ಗ್ರಾಪಂ
**
ಶನಿವಾರಸಂತೆ ಆರೋಗ್ಯ ಕೇಂದ್ರಕ್ಕೆ ಅಗತ್ಯ ವೈದ್ಯರನ್ನು ನೇಮಕ ಮಾಡಬೇಕು. ಹೋಬಳಿ ಕೇಂದ್ರದಲ್ಲಿರುವ ಆಸ್ಪತ್ರೆಯಲ್ಲಿ ಹಳ್ಳಿ ಜನರಿಗೆ ಸೂಕ್ತ ವೈದ್ಯಕೀಯ ಸವಲತ್ತು ದೊರೆಯುತ್ತಿಲ್ಲ. ಆಸ್ಪತ್ರೆಗೆ ಕಾಯಕಲ್ಪ ನೀಡಲು ಸಂಬಂಧಿಸಿದವರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಆದಿತ್ಯ ಗೌಡ, ಸದಸ್ಯರು, ಶನಿವಾರಸಂತೆ ಗ್ರಾಪಂ
**
ಶನಿವಾರಸಂತೆ ದೊಡ್ಡ ಹೋಬಳಿ ಕೇಂದ್ರವಾಗಿದೆ. ಅನುದಾನ ಕಡಿಮೆ ಬಿಡುಗಡೆಯಾಗುತ್ತಿರುವುದರಿಂದ ಹೆಚ್ಚು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶನಿವಾರಸಂತಗೆ ಸುತ್ತಮುತ್ತಲಿನ ಹಳ್ಳಿ ಹಾಗೂ ಗಡಿಭಾಗದಲ್ಲಿರುವ ಹಾಸನ ಜಿಲ್ಲೆಯ ಹಳ್ಳಿ ಜನ ಇಲ್ಲಿಗೆ ವ್ಯಾಪಾರಕ್ಕೆ ಬರುತ್ತಾರೆ. ಆದರೆ, ಇಲ್ಲಿನ ಸಂತೆ ಮಾರುಕಟ್ಟೆ ಅವ್ಯವಸ್ಥೆಯಿಂದ ಕೂಡಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಶನಿವಾರ ಸಂತೆ ಹಿಂದುಳಿದಿದೆ. ಎಸ್.ಸಿ. ಶರತ್‌ಶೇಖರ್, ಸದಸ್ಯರು, ಶನಿವಾರಸಂತೆ ಗ್ರಾಪಂ