ಗಂಗಾವರ ಗೋಮಾಳ ಮಂಜೂರಾತಿಗೆ ಯತ್ನ

12mdka1
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಗಂಗಾವರ ಗ್ರಾಮದಲ್ಲಿರುವ ಗೋಮಾಳ ಜಾಗವನ್ನು ಅಕ್ರಮ- ಸಕ್ರಮ ಸಮಿತಿ ಮೂಲಕ ಅಕ್ರಮವಾಗಿ ಮಂಜೂರು ಮಾಡಿಸಿಕೊಳ್ಳುವ ಪ್ರಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಗಂಗಾವರ ಗ್ರಾಮಸ್ಥರ ಆಕ್ಷೇಪದ ಹಿನ್ನೆಲೆಯಲ್ಲಿ ಅರ್ಜಿ ವಿಲೇವಾರಿ ತಡೆಹಿಡಿಯಲಾಗಿದೆ.

ಗಂಗಾವರ ಗ್ರಾಮದಲ್ಲಿ ೬೦ ಕುಟುಂಬಗಳು, ಸರ್ವೇ ನಂಬರ್ ೨೦/೧ ರಲ್ಲಿ ವಾಸಿಸುತ್ತಿದ್ದಾರೆ. ಮನೆ ಮತ್ತು ಜಾಗವನ್ನು ಸಕ್ರಮಗೊಳಿಸ ಬೇಕೆಂದು ಹಲವು ಗ್ರಾಮಸ್ಥರು ನಮೂನೆ ೫೦, ೫೩, ೫೭ ಹಾಗೂ ೯೪ ಸಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಎಲ್ಲರ ಅರ್ಜಿಗಳನ್ನು ಗೋಮಾಳ ಜಾಗವೆಂದು ವಜಾಗೊಳಿಸಲಾಗಿತ್ತು.

ಗೋಮಾಳ ಜಾಗ ೩೦ ಎಕರೆ ಇದ್ದು, ಆರ್‌ಟಿಸಿಯಲ್ಲಿ ೩೭.೧೯ ಎಕರೆ ಜಾಗವಿದೆ. ಗಂಗಾವರ ಗ್ರಾಮದ ದಿಲೀಪ್ ಎಂಬುವವರಿಗೆ ೨.೬೦ ಎಕರೆ ಜಾಗ ಸಕ್ರಮಗೊಳಿಸಲು ೨೦೧೮-೧೯ನೇ ಸಾಲಿನಲ್ಲಿ ಕಡತ ಸಿದ್ಧ ಪಡಿಸಲಾಗಿದೆ. ದಿಲೀಪ್ ಅವರಿಗೆ ಜಾಗ ಮಂಜೂರಾತಿ ಮಾಡುವ ಬಗ್ಗೆ ಆಲೂರು- ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಪ್ರಚಾರ ಮಾಡಿದ್ದ ಸಂದರ್ಭ ಮಂಜೂರಾತಿ ಪ್ರಕ್ರಿಯೆ ಗ್ರಾಮಸ್ಥರ ಗಮನಕ್ಕೆ ಬಂದಿದೆ.

ಗೋಮಾಳ ಕಾರಣಕ್ಕಾಗಿ ತಮ್ಮ ಅರ್ಜಿ ವಜಾಗೊಳಿಸಲಾಗಿತ್ತು. ಅದೇ ಸರ್ವೇ ನಂಬರ್‌ನಲ್ಲಿ ೨.೬೦ ಎಕರೆ ಜಾಗ ಮಂಜೂರು ಮಾಡಿಸಲು ನಡೆದಿರುವ ಪ್ರಯತ್ನಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತ ಪಡಿಸಿದರು. ಜೂನ್ ೨೦ ರಂದು ಸೋಮವಾರಪೇಟೆ ತಹಸೀಲ್ದಾರ್ ಹಾಗೂ ಜುಲೈ ೧೨ ರಂದು ಮಡಿಕೇರಿ ಶಾಸಕರಿಗೆ ಗ್ರಾಮಸ್ಥರು ಆಕ್ಷೇಪ ಸಲ್ಲಿಸಿದರು.

ಗ್ರಾಮಸ್ಥರ ಆತಂಕ
ಗೋಮಾಳಕ್ಕೆ ಸೇರಿದ ಜಾಗದ ಪೈಕಿ ಕೇವಲ ೩ ಎಕರೆ ಉಳಿದಿದೆ. ಈ ಜಾಗದಲ್ಲಿ ಗ್ರಾಮದ ಊರ ದೇವತೆ ಊರು ಒಡೆಯ ದೇವಸ್ಥಾನ ಇದೆ. ದೊಡ್ಡ ಕೆರೆ ಕೂಡ ಇದೆ. ೯ ಕುಟುಂಬಗಳ ಮನೆಯೂ ಇದೆ. ಹೀಗಿರುವಾಗ, ಗ್ರಾಮಸ್ಥ ದಿಲೀಪ್ ಹೆಸರಿಗೆ ೨.೬೦ ಎಕರೆ ಜಾಗ ಮಂಜೂರು ಮಾಡಿದ್ದಲ್ಲಿ ನಮ್ಮನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂದು ಗಂಗಾವರ ಗ್ರಾಮಸ್ಥರಲ್ಲಿ ಆತಂಕವಿದೆ ಎಂದು ಜಿ.ಎಸ್. ನಾಗರಾಜು ಹೇಳುತ್ತಾರೆ.
೪೫ ವರ್ಷದಿಂದ ಗಂಗಾವರ ಗ್ರಾಮದಲ್ಲಿ ನೆಲೆಸಿದ್ದೇವೆ. ಗೋಮಾಳ ಎಂಬ ಕಾರಣಕ್ಕಾಗಿ ನಮ್ಮ ಅರ್ಜಿ ಹಲವು ಬಾರಿ ತಿರಸ್ಕೃತಗೊಂಡಿದೆ. ಊರು ಒಡೆಯ ದೇವಸ್ಥಾನಕ್ಕೆ ಕನಿಷ್ಠ ೧ ಎಕರೆ ಜಾಗ ಬೇಕು. ಪ್ರತಿವರ್ಷ ಇಲ್ಲಿ ದೊಡ್ಡ ಹಬ್ಬ ನಡೆಯುತ್ತದೆ. ಒಬ್ಬ ವ್ಯಕ್ತಿಗೆ ಜಾಗ ಮಂಜೂರು ಮಾಡಿದ್ದಲ್ಲಿ ದೇವಾಲಯಕ್ಕೂ ಜಾಗ ಇರುವುದಿಲ್ಲ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.

ಅಕ್ರಮವಾಗಿ ಜಾಗ ಮಂಜೂರು ಮಾಡುವುದಿಲ್ಲ. ಹಲವು ವರ್ಷದಿಂದ ನೆಲೆಸಿರುವವರನ್ನು ಒಕ್ಕಲೆಬ್ಬಿಸುವುದಿಲ್ಲ. ಜಾಗದ ಸರ್ವೇ ಮಾಡಿದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಶಾಸಕರು ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ಅಧಿಕಾರಿಗಳು ಹಣದಾಸೆಗೆ ಜಾಗ ಮಂಜೂರು ಮಾಡಲು ಕಡತ ಸಿದ್ಧ ಪಡಿಸಿದ್ದಾರೆಂದು ಗ್ರಾಮಸ್ಥರು ದೂರುತ್ತಿದ್ದಾರೆ.

**
ಅಕ್ರಮ- ಸಕ್ರಮ ಸಮಿತಿಯಲ್ಲಿ ಜಾಗ ಮಂಜೂರಾತಿಗೆ ದಿಲೀಪ್ ಅವರ ಅರ್ಜಿ ಇರುವುದು ನಿಜ. ಗಂಗಾವರ ಗ್ರಾಮಸ್ಥರ ಆಕ್ಷೇಪದ ಹಿನ್ನೆಲೆಯಲ್ಲಿ ಇದುವರೆಗೂ ಜಾಗ ಮಂಜೂರಾತಿ ಮಾಡಿಲ್ಲ. ಗೋಮಾಳ ಜಾಗ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಪ್ರಕರಣ ಕುರಿತು ತನಿಖೆ ನಡೆಸಲಾಗುತ್ತದೆ. ಕಾನೂನು ಬಾಹಿರವಾಗಿ ಜಾಗ ಮಂಜೂರು ಮಾಡುವುದಿಲ್ಲ. ಗೋವಿಂದರಾಜು, ತಹಸೀಲ್ದಾರ್, ಸೋಮವಾರಪೇಟೆ.

**
ಗೋಮಾಳ ಜಾಗದ ಪೈಕಿ ಈಗ ಕೇವಲ ೩ ಎಕರೆ ಮಾತ್ರ ಉಳಿದಿದೆ. ಈ ಜಾಗದಲ್ಲಿ ಊರು ಒಡೆಯ ದೇವಸ್ಥಾನ ಕೂಡ ಇದೆ. ಗೋಮಾಳ ಜಾಗದಲ್ಲಿ ೯ ಮನೆ ಇದ್ದು, ಯಾರಿಗೂ ಜಾಗದ ದಾಖಲೆ ಇರುವುದಿಲ್ಲ. ಹೀಗಿರುವಾಗ, ದಿಲೀಪ್ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಜಾಗ ಮಂಜೂರು ಮಾಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಜಿ.ಎಸ್. ನಾಗರಾಜು, ಗ್ರಾಮಸ್ಥರು, ಗಂಗಾವರ.

**
ದಿಲೀಪ್ ಕುಟುಂಬಕ್ಕೆ ೧೩ ಎಕರೆ ಜಾಗ ಇದೆ. ಇಬ್ಬರು ಸಹೋದರರಿಗೆ ೩.೪೨ ಎಕರೆ ಜಾಗ ವಿಭಾಗ ಮಾಡಿಕೊಡಲಾಗಿದೆ. ಇನ್ನುಳಿದ ೧೦ ಎಕರೆ ಹಿಡುವಳಿದ ತಂದೆ, ಅಜ್ಜಿ ಹೆಸರಿನಲ್ಲಿದೆ. ದಿಲೀಪ್ ಮಂಜೂರು ಮಾಡಿಸಲು ಪ್ರಯತ್ನಿಸುತ್ತಿರುವ ಜಾಗ ಹುಲ್ಲುಗಾವಲು (ಗೋಮಾಳ) ಆಗಿದೆ. ಈ ಜಾಗ ಮಂಜೂರು ಮಾಡದ್ದಂತೆ ಗ್ರಾಮಸ್ಥರು ಶಾಸಕರಿಗೆ ಲಿಖಿತ ಮನವಿ ಪತ್ರ ಸಲ್ಲಿಸಿದ್ದೇವೆ. ಜಿ.ಸಿ. ಪುರುಷೋತ್ತಮ, ಕಾರ್ಯದರ್ಶಿ, ಬಸವಣ್ಣ ದೇವಾಲಯ ಸಮಿತಿ, ಗಂಗಾವರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net