

ಕೆ.ಎಂ.ದೊಡ್ಡಿ: ರಂಗಕಲೆಗಳು ನಶಿಸುತ್ತಿರುವ ದಿನಗಳಲ್ಲಿ ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ನಾಟಕಗಳನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಮಾಜ ಸೇವಕಿ ಚೈತ್ರಾ ಶಶಿಧರ್‌ಗೌಡ ತಿಳಿಸಿದರು.
ಸಮೀಪದ ಮೆಣಸಗೆರೆ ಗ್ರಾಮದಲ್ಲಿ ಶ್ರೀ ಶನಿದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಹದೇಶ್ವರ ಕೃಪ ಘೋಷಿತ ನಾಟಕ ಮಂಡಳಿಯ ವತಿಯಿಂದ ಏರ್ಪಡಿಸಿದ್ದ ಶ್ರೀ ಶನಿಪ್ರಭಾವ ಹಾಗೂ ರಾಜ ಸತ್ಯವ್ರತ ಎಂಬ ಪೌರಾಣಿಕ ನಾಟಕದಲ್ಲಿ ಅಭಿನಂದನೆ ಸ್ವೀಕರಿಸಿ ಆರ್ಥಿಕ ನೆರವು ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಕಲಾವಿದರು ಮತ್ತು ಜನರಿಂದ ಮಾತ್ರ ರಂಗಭೂಮಿ ನಾಟಕಗಳನ್ನು ಉಳಿಸಲು ಪ್ರದರ್ಶನಗಳನ್ನು ಆಗಾಗ್ಗೆ ನಡೆಸಿದರೆ ಹಲವು ರಂಗಭೂಮಿ ಕಲಾವಿದರ ಕುಟುಂಬಗಳು ಉಳಿಯುತ್ತವೆ. ಹೀಗಾಗಿ ರಂಗಕಲೆ ಪೋತ್ಸಾಹಿಸಬೇಕು. ಪ್ರಸ್ತುತ ಟಿವಿಯಲ್ಲಿ ಬರುವಂತ ಧಾರಾವಾಹಿಗಳಿಂದ ನಮ್ಮ ಸಂಸ್ಕೃತಿ ನಾಶಗೊಳ್ಳುತ್ತಿದೆ. ಯುವ ಸಮುದಾಯ ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗಿ ಮೊಬೈಲ್‌ಗಳಿಗೆ ದಾಸರಾಗುತ್ತಿದ್ದು, ಇಂತಹ ಸನ್ನಿವೇಶದಲ್ಲಿ ಗ್ರಾಮೀಣ ನಾಟಕಗಳು ನಶಿಸುತ್ತಿವೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಪಾರ್ವತಮ್ಮ, ಮಾಜಿ ಅಧ್ಯಕ್ಷ ಎಂ.ಕೆ.ಮಹದೇವು, ಮುಖಂಡರಾದ ನಂಜುಂಡಸ್ವಾಮಿ, ಪ್ರಮೋದ್, ಆಲೂರೇಗೌಡ, ರಾಜಣ್ಣ, ಚಲುವರಾಜು, ರಾಜೇಶ್ ಸೇರಿದಂತೆ ಉಪಸ್ಥಿತರಿದ್ದರು.