ಶನೇಶ್ವರ ಸ್ವಾಮಿ ದೇವಾಲಯ ಕಳವಿಗೆ ಯತ್ನ

1ald 1
Published on

ಆಲ್ದೂರು: ರಾಷ್ಟೀಯಹೆದ್ದಾರಿ 173ರ ವಸ್ತಾರೆ ಸಮೀಪ ಮಂಗಳವಾರ ರಾತ್ರಿ ಶನೇಶ್ವರ ಸ್ವಾಮಿ ದೇವಸ್ಥಾನ ಕಳ್ಳತನಕ್ಕೆ ಯತ್ನ ನಡೆದಿದೆ.

ರಾತ್ರಿ 11.30 ಸಮಯದಲ್ಲಿ ವಸ್ತಾರೆಯ ಶನೇಶ್ವರ ಸ್ವಾಮಿ ದೇವಸ್ಥಾನದ ಮುಂದಿನ ಬಾಗಿಲು ಬೀಗ ಮುರಿದು ಕಳ್ಳತನಕ್ಕೆ ಯತ್ನಿಸುತ್ತಿದ್ದ ಸಂದರ್ಭದಲ್ಲಿ ಇದೇ ಮಾರ್ಗದಲ್ಲಿ ಬಂದ ಹಳಿಯೂರು ಗ್ರಾಮದ ರಾಕೇಶ್‌ಎಂಬುವವರು ಅನುಮಾನಗೊಂಡು ದೇವಸ್ಥಾನದ ಬಳಿ ವಿಚಾರಿಸಲು ಹೋದಾಗ ಕಳ್ಳರು ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ.

ಬೈಕ್‌ನ್ನು ದೇವಸ್ಥಾನದ ಮುಂಭಾಗ ಬಿಟ್ಟು ದೇವಾಲಯ ಪ್ರವೇಶಿಸಿರುವ ಕಳ್ಳರು ದೇವಾಲಯದ ಮುಂಭಾಗದ ಬಾಗಿಲಿನ ಬೀಗವನ್ನು ಕಲ್ಲಿನಿಂದ ಒಡೆದು ನಂತರ ಡೋರ್‌ಲಾಕ್ ಒಡೆಯುತ್ತಿದ್ದ ವೇಳೆ ರಾಕೇಶ್ ಸ್ಥಳಕ್ಕೆ ಬಂದಿದ್ದರಿಂದ ಬಿಟ್ಟು ಪರಾರರಿಯಾಗಿದ್ದಾರೆ. ಕಳ್ಳತನಕ್ಕೆ ನಂಬರ್ ಪ್ಲೆಟ್ ಇಲ್ಲದ ಬೈಕ್ ಬಳಸಲಾಗಿದೆ. ಬೈಕ್‌ನ ಬ್ಯಾಗ್‌ನಲ್ಲಿ 4 ನಾಡ ಬಾಂಬ್‌ಗಳು ಪತ್ತೆಯಾಗಿವೆ. ಒಂದು ನಾಡಬಾಂಬ್ ಸಿಡಿದು ಒಬ್ಬರ ಕೈಗೆ ಗಾಯವಾಗಿದೆ. ಆಲ್ದೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ತಿಂಗಳು ವಸ್ತಾರೆ ಗ್ರಾಮದ ರಸ್ತೆ ಬದಿ ಅಂಗಡಿಗೆ ನುಗ್ಗಿ ಕಳ್ಳತನ ಮಾಡಲಾಗಿತ್ತು. ಈ ಘಟನೆ ಸಿಸಿ ಕ್ಯಾಮರದಲ್ಲಿ ದಾಖಲಾಗಿತ್ತು. ಆಲ್ದೂರಿನ ಮುಖ್ಯ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದ ಹುಂಡಿ ಹೊಡೆದು ಹಣ ದೋಚಲಾಗಿತ್ತು. ಬೀರಂಜಿ ಹಳ್ಳ ಸಮೀಪದ ಕ್ಯಾಂಟೀನ್‌ಗಳಲ್ಲಿ ಬೀಗ ಒಡೆದು ಅಂಗಡಿಯಲ್ಲಿದ್ದ ನಗದು ಹಾಗೂ ವಸ್ತುಗಳು, ಮೂಡಿಗೆರೆ ರಸ್ತೆಯಲ್ಲಿ ಪೊಲೀಸ್ ಠಾಣೆ ಸಮೀಪದಲ್ಲಿರುವ ಕಾಫಿಲಿಂಕ್ಸ್ ನಲ್ಲಿ 100 ಕೆಜೆ ಕಾಳು ಮೆಣಸು ಕದ್ದು ಪರಾರಿಯಾಗಿದ್ದರು. ಈ ಘಟನೆಗಳಿಗೆ ಸಂಭಂದಿಸಿದಂತೆ ಆಲ್ದೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net