

ಹನೂರು: ತಾಲೂಕಿನ ದೊಮ್ಮನಗದ್ದೆ ಗ್ರಾಮದ ಶ್ರೀ ಶನೈಶ್ಚರಸ್ವಾಮಿ ದೇಗುಲದಲ್ಲಿ ವಿಜಯದಶಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ವಿವಿಧ ದೇವರ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇಗುಲವನ್ನು ವಿವಿಧ ಪುಷ್ಪ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಆಯುಧ ಪೂಜೆಯಂದು ಸ್ವಾಮಿಗೆ ಗಣಪತಿಪೂಜೆ, ಗಣಹೋಮ, ನವಗ್ರಹಹೋಮ, ವಾಸ್ತು ಹೋಮ ನೆರವೇರಿಸಲಾಯಿತು. ವಿಜಯದಶಮಿ ದಿನವಾದ ಮಂಗಳವಾರ ಬೆಳಗ್ಗೆ ತತ್ವಹೋಮ, ಕಳಶಾರ್ಚನೆ, ಕಳಸಹೋಮ, ಶಾಂತಿ ಹೋಮಗಳು ನಡೆದವು. ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ದೇಗುಲದಲ್ಲಿ ಬೆಳಗ್ಗೆ ಹುಲಿವಾಹನ, ನಾಗಭರಣ, ಗರುಡವಾಹನ, ಕಾಮಧೇನು ಹಾಗೂ ಕಲ್ಪವೃಕ್ಷ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮೂರ್ತಿಗಳನ್ನು ಪ್ರತ್ಯೇಕ ಉತ್ಸವ ವಾಹನಗಳಲ್ಲಿ ಕೂರಿಸಿ ವಿವಿಧ ಪುಷ್ಪಗಳಿಂದ ಸಿಂಗರಿಸಿ ಸತ್ತಿಗೆ, ಸೂರಿಪಾನಿ, ಾದ್ಯಮೇಳ ಸಮೇತ ಮೆರವಣಿಗೆ ಮೂಲಕ ದೇಗುಲದ ಸಮೀಪದಲ್ಲಿರುವ ಬನ್ನಿಮರಕ್ಕೆ ತೆರಳಿ ಪೂಜೆ ನೆರವೇರಿಸಲಾಯಿತು. ಭಕ್ತರು ಪಟಾಕಿ ಸಿಡಿಸಿ ವಾದ್ಯದ ತಾಳಕ್ಕೆ ಹೆಜ್ಜೆ ಹಾಕಿದರು.
ಕೊಳ್ಳೇಗಾಲ, ಮಹದೇಶ್ವರಬೆಟ್ಟ, ಕೌದಳ್ಳಿ, ರಾಮಾಪುರ, ಎಲ್ಲೇಮಾಳ, ಹನೂರು, ಶಾಗ್ಯ, ಬಂಡಳ್ಳಿ, ಲೊಕ್ಕನಹಳ್ಳಿ, ಮಣಗಳ್ಳಿ, ಮಲ್ಲಯ್ಯನಪುರ, ಪಳನಿಮೇಡು ಸತ್ತಾರಮೇಡು, ಕುರಟ್ಟಿಹೊಸೂರು, ದಿನ್ನಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ದೇಗುಲದ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.