ಮನಸ್ಸಿನ ಜಡತ್ವ ಕಳಚುವ ಯಕ್ಷಗಾನ : ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ

New Project (5)
Published on

ವಿಜಯವಾಣಿ ಸುದ್ದಿಜಾಲ ಗುರುಪುರ  ಏನೂ ಮಾಡಿಲ್ಲ ಎಂದು ಹೇಳುವ ಎಸ್.ವಿ.ಭಟ್ಟರು ಶಿಕ್ಷಕರಾಗಿ ಯಕ್ಷಕಲೆ ಪಸರಿಸುವ ನಿಟ್ಟಿನಲ್ಲಿ ಸಂಘಟನಾ ಕಾರ್ಯ ನಡೆಸಿದ್ದಾರೆ. ತ್ಯಾಗದ ಗುಣದಿಂದ ವ್ಯಕ್ತಿ ಪೂಜ್ಯನಾಗುತ್ತಾನೆ. ಯಕ್ಷಗಾನ ನಮ್ಮ ಮನಸ್ಸಿನ ಜಡತ್ವ ಕಳಚಿ ಸಂತೋಷದತ್ತ ಕೊಂಡೊಯ್ಯುತ್ತದೆ. ಯಕ್ಷಗಾನ ಮತ್ತು ಶಿಕ್ಷಣದಲ್ಲಿ ಲಯವಿರಬೇಕು. ಅವೆರಡೂ ಭಟ್ಟರಲ್ಲಿದೆ ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಗುರುಪುರ ಕಾರಮೊಗರಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನ ಸಭಾಂಗಣದಲ್ಲಿ ಪ್ರಸಿದ್ಧ ಪ್ರಸಂಗಕರ್ತ, ಯಕ್ಷಗಾನ ಸಾಹಿತಿ, ಯಕ್ಷಗಾನ ಅರ್ಥದಾರಿ, ಯಕ್ಷ ಕಲಾ ವಿಮರ್ಶಕ ಅಭಿನವ ಪಾರ್ತಿಸುಬ್ಬ ಸೀತಾನದಿ ಗಣಪಯ್ಯ ಶೆಟ್ಟಿ ಅವರ 38ನೇ ವರ್ಷದ ಸಂಸ್ಮರಣೆ ಪ್ರಯುಕ್ತ ಬೈಲೂರಿನ ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನ ಮಂಗಳವಾರ ‘ಸೀತಾನದಿ ಪ್ರಶಸ್ತಿ’ಯನ್ನು ಉಡುಪಿ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಶಾನಾಡಿ ವಿಶ್ವೇಶ್ವರ ಭಟ್ ಅವರಿಗೆ ಪ್ರದಾನಿಸಿದ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಪ್ರತಿಷ್ಠಾನ ಅಧ್ಯಕ್ಷ ಪಿ.ಕಿಶನ್ ಹೆಗ್ಡೆ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷರಂಗಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ಎಸ್.ವಿ.ಭಟ್ಟರಿಗೆ ಸೀತಾನದಿ ಪ್ರಶಸ್ತಿ ನೀಡಿದ್ದೇವೆ. ಅವರಿಗೆ ಪ್ರಶಸ್ತಿ ನೀಡಿರುವುದರಿಂದ ಪ್ರಶಸ್ತಿ ಘನತೆ ಹೆಚ್ಚಿದೆ. ಪ್ರತಿಷ್ಠಾನ ಇರುವವರೆಗೆ ಯಕ್ಷರಂಗಕ್ಕೆ ಸೇವೆ ಸಲ್ಲಿಸಿದ ಮಹನೀಯರ ಗುರುತಿಸಿ ಗೌರವಿಸುವ ಕೆಲಸ ನಡೆಯಲಿದೆ. ಪ್ರತಿಷ್ಠಾನ ಪ್ರತಿವರ್ಷ ಲಕ್ಷಾಂತರ ರೂ. ವಿದ್ಯಾರ್ಥಿವೇತನ ನೀಡುತ್ತ ಬಂದಿದೆ ಎಂದರು. ಉದ್ಯಮಿ, ವಾಗ್ಮಿ ಪೊಲ್ಯ ಉಮೇಶ ಶೆಟ್ಟಿ ಮಾತನಾಡಿದರು. ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ಎಸ್.ಅಶೋಕ ಕುಮಾರ್ ಶೆಟ್ಟಿ ಬೆಂಗಳೂರು ಸ್ವಾಗತಿಸಿದರು. ಮಣಿಪಾಲ ಎಂಐಟಿ ನಿವೃತ್ತ ಪ್ರಾಧ್ಯಾಪಕ ಎಸ್.ವಿ.ಉದಯ ಕುಮಾರ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಪ್ರತಿಷ್ಠಾನ ಗೌರವ ಸಲಹೆಗಾರ ಎಸ್.ಜಯರಾಮ ಶೆಟ್ಟಿ ಪಡಂಗಡಿ, ಕಟೀಲು ಯಕ್ಷಗಾನ ಮೇಳದ ಸಂಚಾಲಕ ಕೆ.ದೇವಿಪ್ರಸಾದ್ ಶೆಟ್ಟಿ, ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನ ಮುಂಡಿತ್ತಾಯ ಪಾತ್ರಿ ಚಂದ್ರಹಾಸ ಪೂಜಾರಿ ಕೌಡೂರು, ಪ್ರತಿಷ್ಠಾನ ಪದಾಧಿಕಾರಿಗಳು, ಸದಸ್ಯರು, ಯಕ್ಷಗಾನ ಆಸಕ್ತರು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನ ಗೌರವ ಸಲಹೆಗಾರ ಭುವನಪ್ರಸಾದ್ ಹೆಗ್ಡೆ ಮಣಿಪಾಲ ವಂದಿಸಿದರು. ಬಳಿಕ ಬಜ್ಪೆ ತಳಕಲದ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರದ ಮಹಿಳಾ ಕಲಾವಿದರಿಂದ ‘ಶ್ರೀಕೃಷ್ಣ ಪಾರಿಜಾತ-ನರಕಾಸುರ ಮೋಕ್ಷ’ ಯಕ್ಷಗಾನ ಪ್ರದರ್ಶನಗೊಂಡಿತು.

ಯಕ್ಷಗಾನ ಕಲಾರಂಗಕ್ಕೆ ಕೊಡುಗೆ ನೀಡಿದವರಿಗೆ ಈ ಪ್ರಶಸ್ತಿ ಸಂದಾಯವಾಗಬೇಕು. ಯಕ್ಷಗಾನ ಕ್ಷೇತ್ರದಲ್ಲಿ ಸಣ್ಣ ಕೆಲಸ ಮಾಡಿರುವ ತನ್ನನ್ನು ಪ್ರತಿಷ್ಠಾನ ಗುರುತಿಸುವ ಕೆಲಸ ಮಾಡಿದೆ. ಸಂಘಟನಾ ನೆಲೆಯಲ್ಲಿ ತನಗೆ ಈ ಪ್ರಶಸ್ತಿ ಸಂದಿದೆ. ಶಿಕ್ಷಕನಾಗಿದ್ದ ತನ್ನನ್ನು ಉದ್ಯಾವರ ಮಾಧವ ಆಚಾರ್ಯರು ಸಾಮಾಜಿಕ ರಂಗಕ್ಕೆ ಕರೆ ತಂದಿದ್ದರು. ಶಾನಾಡಿ ವಿಶ್ವೇಶ್ವರ ಭಟ್ ಉಪಾಧ್ಯಕ್ಷ ಉಡುಪಿ ಯಕ್ಷಗಾನ ಕಲಾರಂಗ

ಗೌರವ ಪುರಸ್ಕಾರ ಉಡುಪಿ-ನಿಟ್ಟೂರು ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ, ಯಕ್ಷ ಸಂಘಟಕ ಹಾಗೂ ಉಡುಪಿ ಯಕ್ಷಗಾನ ಕಲಾರಂಗ ಉಪಾಧ್ಯಕ್ಷ ಶಾನಾಡಿ ವಿಶ್ವೇಶ್ವರ ಭಟ್ ಅವರಿಗೆ ‘ಸೀತಾನದಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಶ್ರೀ ಅಗ್ನಿದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ, ಗಡಿಕಾರ ಡಾ.ರವಿರಾಜ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮುಂದಿನ ವರ್ಷ ಸೀತಾನದಿ ಪ್ರಶಸ್ತಿ ಪ್ರದಾನ ಸಮಾರಂಭ ಮುಂಬೈಯಲ್ಲಿ ನಡೆಯಲಿದ್ದು, ಪೊಲ್ಯ ಉಮೇಶ್ ಶೆಟ್ಟಿ ಅವರಿಗೆ ಪ್ರಾಯೋಜಕತ್ವ ವೀಳ್ಯ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net