ಅವಮಾನವೇ ಸನ್ಮಾನಕ್ಕೆ ಮೆಟ್ಟಿಲು

9
ಯಕ್ಸಂಬಾದ ನಣದಿ ಕ್ಯಾಂಪಸ್‌ನಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಹಮ್ಮಿಕೊಂಡಿದ್ದ ಪ್ರೇರಣಾ ಉತ್ಸವ-2023ರ ಸಮಾರಂಭದಲ್ಲಿ ಜ್ಯೋತಿಪ್ರಸಾದ ಜೊಲ್ಲೆ ದಂಪತಿಯನ್ನು ಸತ್ಕರಿಸಲಾಯಿತು. ಶಶಿಕಲಾ ಜೊಲ್ಲೆ, ಅಣ್ಣಾಸಾಹೇಬ ಜೊಲ್ಲೆ, ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಮಂಜುನಾಥ ಸ್ವಾಮೀಜಿ, ಪ್ರಭುಚನ್ನಬಸವ ಸ್ವಾಮೀಜಿ ಇತರರಿದ್ದರು.
Published on

ಚಿಕ್ಕೋಡಿ ಗ್ರಾಮೀಣ: ಅವಮಾನಗಳನ್ನು ಸವಾಲಾಗಿ ಸ್ವೀಕರಿಸಿದರೆ ಸನ್ಮಾನ ಒಲಿದು ಬರುತ್ತದೆ. ಸಮಾಜದ ನಿಂದನೆಗೆ ಹೆದರಿ ಅಂದು ಆತ್ಮಹತ್ಯೆ ಮಾಡಿಕೊಂಡಿದ್ದರೆ ಇಂದು ಬಿರುದು ಸನ್ಮಾನಗಳಿಂದ ವಂಚಿತನಾಗುತ್ತಿದ್ದೆ ಎಂದು 2023ನೇ ಸಾಲಿನ ಪ್ರೇರಣಾ ಪ್ರಶಸ್ತಿ ಪುರಸ್ಕೃತ ಮೂಡಬಿದರೆಯ ಸ್ಫೂರ್ತಿ ವಿಶೇಷ ಮಕ್ಕಳ ವಸತಿ ಶಾಲೆಯ ಸಂಸ್ಥಾಪಕ ಪ್ರಕಾಶ ಶೆಟ್ಟಿಗಾರ ಹೇಳಿದರು.

ತಾಲೂಕಿನ ಯಕ್ಸಂಬಾ ಪಟ್ಟಣದ ನಣದಿ ಕ್ಯಾಂಪಸ್‌ನಲ್ಲಿ ಜೊಲ್ಲೆ ಗ್ರೂಪ್ ಆಯೋಜಿಸಿದ್ದ ಪ್ರೇರಣಾ ಉತ್ಸವ-2023 ಕಾರ್ಯಕ್ರಮದಲ್ಲಿ ಶುಕ್ರವಾರ ಪ್ರೇರಣಾ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಪಾರ್ಶ್ವವಾಯುನಿಂದ ಒಂದು ಕಾಲು ಶಕ್ತಿಹೀನವಾಗಿದ್ದ ಸಂರ್ಭದಲ್ಲಿ ಸಮಾಜ ಕೊಂಕು ಮಾತುಗಳನ್ನಾಡುತ್ತಿತ್ತು. ಅದನ್ನೇ ಸವಾಲಾಗಿ ಸ್ವೀಕರಿಸಿ ನೂರಾರು ಅಂಗವಿಕಲ ಮಕ್ಕಳ ಬಾಳಿಗೆ ಬೆಳಕಾಗಿದ್ದೇನೆ ಎಂದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಅಂಗವಿಕಲ ಮಕ್ಕಳಿಗಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ 12 ವರ್ಷಗಳಿಂದ ಪ್ರೇರಣಾ ಪುರಸ್ಕಾರ ನೀಡುತ್ತಿದ್ದೇವೆ. 2027ರಲ್ಲಿ ಆಸ್ಟ್ರೀಲಿಯಾದಲ್ಲಿ ಜರುಗಲಿರುವ ವಿಶೇಷ ಒಲಿಂಪಿಕ್‌ನಲ್ಲಿ ಕರ್ನಾಟಕದ ಅಂಗವಿಕಲ ಮಕ್ಕಳು ಭಾಗವಹಿಸುವ ನಿಟ್ಟಿನಲ್ಲಿ ಈಗಾಗಲೇ ಶಿಕ್ಷಕರಿಗೆ, ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಜೊಲ್ಲೆ ಗ್ರೂಪ್‌ನಿಂದ ಮುಂಬರುವ ದಿನಗಳಲ್ಲಿ ಆಶಾಜ್ಯೋತಿ ವೃದ್ಧಾಶ್ರಮ ತೆರೆಯಲಾಗುವುದು ಎಂದರು.

ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಜೊಲ್ಲೆ ಸಮೂಹದಂತಹ ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರದ ಕ್ರಮದಿಂದಾಗಿ ಶಿಕ್ಷಣ ವ್ಯವಸ್ಥೆ ಸಾಕಷ್ಟು ಸುಧಾರಣೆ ಕಂಡಿದೆ ಎಂದರು.

ಹುಕ್ಕೇರಿ ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ, ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಜೊಲ್ಲೆ ಸಮೂಹದ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕನ್ಹೇರಿ ಸಿದ್ಧಸಂಸ್ಥಾನ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಖಡಕಲಾಟದ ಶಿವಬಸವ ಸ್ವಾಮೀಜಿ, ಪರಮಾನಂದವಾಡಿಯ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ನಿಪ್ಪಾಣಿಯ ಪ್ರಾಣಲಿಂಗ ಸ್ವಾಮೀಜಿ, ಸವದತ್ತಿಯ ಭೃಮರಾಂಭಾದೇವಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಜರಂಗದಳ ಉತ್ತರ ಪ್ರಾಂತ ವಿಭಾಗ ಪ್ರಮುಖ ವಿಠ್ಠಲಜಿ, ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಂ.ಪಿ.ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ಪ್ರಣವ ಮಾನವಿ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ರಮೇಶ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net