

ಶಿವಮೊಗ್ಗ : ಕಳೆದ ವರ್ಷ ಮಳೆಗಾಲದಲ್ಲಿ ಉಂಟಾಗಿರುವ ಹಾನಿಗೆ ಪರಿಹಾರ ವಿತರಣೆ ಹಾಗೂ ವಿವಿಧ ವಸತಿ ಯೋಜನೆಗಳಡಿ ಮನೆ ನಿರ್ಮಿಸಿಕೊಂಡವರಿಗೆ ಹಣ ಬಿಡುಗಡೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳ ಸಭೆಯನ್ನು ಶೀಘ್ರವೇ ಕರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಹಿಂದಿನ ವರ್ಷಗಳ ಮಳೆ ಹಾನಿಗೆ ಎಲ್ಲರಿಗೂ ಸಮರ್ಪಕವಾಗಿ ಪರಿಹಾರ ನೀಡಿಲ್ಲ ಎಂಬ ವಿಚಾರ ಸರ್ಕಾರಕ್ಕೆ ಅವಮಾನವಾಗಿದೆ. ಸಕಾಲದಲ್ಲಿ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಬೇಕಾದ್ದು ಅವಶ್ಯಕ. ಹೀಗಾಗಿ ಹಿರಿಯ ಅಧಿಕಾರಿಗಳ ಸಭೆ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮಂಗಳವಾರ ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಹೇಳಿದರು.
ಮಳೆಹಾನಿ ಪರಿಹಾರ ಕೋರಿ ಸಲ್ಲಿಕೆಯಾದ ಅರ್ಜಿಯೇ ಕಳೆದುಹೋಗಿದೆ ಎಂದು ಅಧಿಕಾರಿಗಳು ಹೇಳುತ್ತಿರುವುದು ದುರದೃಷ್ಟಕರ. ಹೀಗಾದರೆ ಜನಪ್ರತಿನಿಧಿಗಳು ಜನತೆಗೆ ಏನು ಉತ್ತರ ನೀಡಬೇಕು? ಪರಿಹಾರ ನೀಡುವ ವಿಷಯದಲ್ಲಿ ಕೇವಲ ಮಾರ್ಗಸೂಚಿ ಅನುಸರಿಸಿದರೆ ಸಾಲದು, ಮಾನವೀಯತೆಯೂ ಇರಬೇಕು ಎಂದು ಅಧಿಕಾರಿಗಳಿಗೆ ಪರೋಕ್ಷವಾಗಿ ತಿಳಿಸಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಕಳೆದೊಂದು ತಿಂಗಳಿನಿಂದ ಮಳೆಗೆ ಸಾಗರ ತಾಲೂಕಿನಲ್ಲಿ ವ್ಯಾಪಕ ಹಾನಿಯಾಗಿದೆ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕು. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನೀಡಿ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಜಿಪಂ ಸಿಇಒ ಎನ್.ಹೇಮಂತ್ ಸಭೆಯಲ್ಲಿ ಉಪಸ್ಥಿತರಿದ್ದರು. ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕಾ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಭಾರತಿ ಶೆಟ್ಟಿ, ಬಲ್ಕಿಶ್ ಬಾನು ಮುಂತಾದವರು ಭಾಗವಹಿಸಿದ್ದರು.