ಸೇನಾನಿಗಳಿಗೆ ಅವಮಾನ: ಗಡಿಪಾರಿಗೆ ಶಿವಕುಮಾರ್ ನಾಣಯ್ಯ ಒತ್ತಾಯ

SHIVAKUMAR NANAIHA
Published on

ಮಡಿಕೇರಿ: ಭಾರತ ದೇಶ ಕಂಡ ಅಪ್ರತಿಮ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕೆಂದು ಕೊಡಗು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಧಾನ ಸಂಚಾಲಕರಾದ ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದ ಹೆಮ್ಮೆಯ ವೀರಪುತ್ರರಿಬ್ಬರನ್ನು ಅವಮಾನಿಸಿರುವುದು ಖಂಡನೀಯ ಮತ್ತು ಇದೊಂದು ದೇಶದ್ರೋಹದ ಪ್ರಕರಣವಾಗಿದೆ. ಆದ್ದರಿಂದ ಸರ್ಕಾರವೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ದೂರು ದಾಖಲಿಸಿಕೊಂಡು ಜಾಮೀನು ರಹಿತ ಬಂಧನಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಭಾರತ ರತ್ನ ಗೌರವಕ್ಕೆ ಸಮಾನರಾದ ಫೀ.ಮಾಕಾರ್ಯಪ್ಪ ಹಾಗೂ ಪದ್ಮಭೂಷಣ ಗೌರವಕ್ಕೆ ಭಾಜರಾಗಿರುವ ಜನರಲ್ ಕೆ.ಎಸ್.ತಿಮ್ಮಯ್ಯ ಅವರುಗಳು ಸೇನಾಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳ ಬಗ್ಗೆ ಅರಿವಿಲ್ಲದೆ ಕಿಡಿಗೇಡಿಯೊಬ್ಬ ಅವಹೇಳನ ಮಾಡಿದ್ದಾನೆ. ಈತನ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ದೇಶದ ರಕ್ಷಣೆಗಾಗಿ ತ್ಯಾಗ ಬಲಿದಾನಗೈದ ವೀರ ಯೋಧರಿಗೆ ಎಲ್ಲೂ ಅನ್ಯಾಯವಾಗದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಸೇನಾಧಿಕಾರಿಗಳನ್ನು ಅಪಮಾನ ಮಾಡಿದ ವ್ಯಕ್ತಿಗಳು ಸುಲಭವಾಗಿ ಬಂಧನದಿಂದ ಬಿಡುಗಡೆಯಾಗದಂತೆ ನಿಯಮ ರೂಪಿಸಬೇಕು. ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಅವಮಾನಿಸಿದ ಪ್ರಕರಣದ ಆರೋಪಿಯನ್ನು ಜಾಮೀನು ರಹಿತ ಬಂಧನಕ್ಕೆ ಒಳಪಡಿಸಿ ಕಠಿಣ ಶಿಕ್ಷೆಗೆ ಗುರಿ ಮಾಡುವ ಮೂಲಕ ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಶಿವಕುಮಾರ್ ನಾಣಯ್ಯ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net