

ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಮಹಾಸಭೆಯ ಕೇಂದ್ರ ಕಚೇರಿಯಲ್ಲಿ ಗುರುವಾರ ಶಾಮನೂರು ಶಿವಶಂಕರಪ್ಪ ಅವರು ರಾಜ್ಯ ಘಟಕದ ನೂತನ ಅಧ್ಯಕ್ಷ ಶಂಕರ ಬಿದರಿ ಹಾಗೂ ಇತ್ತೀಚಿಗೆ ಚುನಾಯಿತರಾದ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಆಗಮಿಸಿ ಮಹಾಸಭೆಯ ಚುನಾವಣೆ ಕಾರ್ಯಕ್ಕೆ ನಿಯೋಜಿತರಾಗಿರುವ ಮುಖ್ಯ ಚುನಾವಣಾಧಿಕಾರಿ ಎಂ.ಬಿ.ದ್ಯಾಬೇರಿ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಎ.ಎಸ್.ವೀರಣ್ಣ, ಎಂ.ಎನ್.ರಾಜಶೇಖರಪ್ಪ (ಅಣಬೇರು ರಾಜಣ್ಣ), ಬಿ.ಎಸ್.ಸಚ್ಚಿದಾನಂದಮೂರ್ತಿ, ಎಚ್.ಎಂ.ರೇಣುಕ ಪ್ರಸನ್ನ, ಚಿದಾನಂದ ಎಸ್.ಮಠದ, ಕೋರಿ ವಿರುಪಾಕ್ಷಪ್ಪ, ಗಂಗಮ್ಮ ಬಸವರಾಜು, ಚಂದ್ರಕಲ ಶ್ರೀಕಂಠರಾಧ್ಯ, ರೂಪಶೇಖರ ಮತ್ತು ಸೂಚಕರು / ಅನುಮೋದಕರಾಗಿ ಉಪಸ್ಥಿತರಿದ್ದರು.
ಸೆ.29ರಂದು ಮತದಾನ ನಿಗದಿ:
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ಸೆ.11 ಕೊನೆಯ ದಿನವಾಗಿರುತ್ತದೆ. ಸೆ.12ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಸೆ.15ರಂದು ಉಮೇದುವಾರಿಕೆ ಹಿಂಪಡೆಯಲು ಅವಕಾಶವಿರುತ್ತದೆ. ಸೆ.29ರಂದು ಮತದಾನಕ್ಕೆ ದಿನ ನಿಗದಿ ಮಾಡಲಾಗಿದೆ ಎಂದು ಮಹಾಸಭಾ ಚುನಾವಣೆಯ ಉಪ ಚುನಾವಣಾಧಿಕಾರಿ ಸಿ.ಎಸ್.ವೀರೇಶ್ ತಿಳಿಸಿದ್ದಾರೆ.