ಶಾಲೆಗಳಿಗೆ ಬೇಕು ಕಾಯಕಲ್ಪ, ವಿಶೇಷ ಗ್ರಾಮಸಭೆಯಲ್ಲಿ ಮಕ್ಕಳ ಮೊರೆ, ಹಕ್ಕುಗಳನ್ನು ರಕ್ಷಣೆ ಮಾಡಲು ಸಲಹೆ

28 Nela ph 02 GramaSabe Udgatane
Published on

ನೆಲಮಂಗಲ: ಶಾಲೆಗೆ ಪೀಠೋಪಕರಣ, ಕ್ರೀಡಾಸಾಮಗ್ರಿ, ಶಾಲಾವರಣದಲ್ಲಿ ಕಸದ ರಾಶಿ ವಿಲೇವಾರಿ ಮಾಡಲು ಮನವಿ... ಹೀಗೆ ಹಲವು ಸಮಸ್ಯೆ ಪರಿಹಾರಕ್ಕೆ ಮಕ್ಕಳು ಒತ್ತಾಯಿಸಿದ ಘಟನೆಗೆ ಮೈಲನಹಳ್ಳಿಯಲ್ಲಿ ಆಯೋಜಿಸಿದ್ದ ಮಹಿಳೆಯರು ಮತ್ತು ಮಕ್ಕಳ ವಿಶೇಷ ಗ್ರಾಮಸಭೆ ಸಾಕ್ಷಿಯಾಯಿತು.

ತಾಲೂಕಿನ ಮೈಲನಹಳ್ಳಿಯಲ್ಲಿ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವಿಕಾಸ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳೆಯರು ಮತ್ತು ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಮಕ್ಕಳು ಜನಪ್ರತಿನಿಧಿಗಳನ್ನು ಸಾಕಷ್ಟು ಪ್ರಶ್ನೆ ಕೇಳಿದರು.

ನೋಡಲ್ ಅಧಿಕಾರಿ ಆರ್.ವೆಂಕಟೇಶ್‌ರೆಡ್ಡಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಲಿರುವ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಣೆ ಮಾಡಬೇಕಿದೆ ಎಂದು ತಿಳಿಸಿದರು.

ಮಹಿಳೆಯರಿಗೆ ಮಕ್ಕಳಿಗಾಗಿ ವಿಶೇಷ ಹಕ್ಕುಗಳ ಜತೆಗೆ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಿದ್ದು ಪ್ರಯೋಜನ ಪಡೆದುಕೊಳ್ಳಬೇಕು. ಗರ್ಭಿಣಿ ಮತ್ತು ಬಾಣಂತಿಯರಿಗೆ ಮಾತೃಪೂರ್ಣ ಯೋಜನೆಯಡಿ ಪೌಷ್ಟಿಕ ಆಹಾರ ವಿತರಣೆ, ಮಾತೃವಂದನಾ ಯೋಜನೆಯಡಿ ಮೊದಲ ಮಗುವಿನ ಬಾಣಂತಿಯರಿಗೆ 5 ಸಾವಿರ, ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆಯಡಿ 6 ಸಾವಿರ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

1 ರಿಂದ 6ವರ್ಷದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೂರಕವಾದ ಆಹಾರ, ಶಿಕ್ಷಣವನ್ನು ಕೊಡಲಾಗುತ್ತಿದೆ. ಭಾಗ್ಯಲಕ್ಷ್ಮೀ ಯೋಜನೆಯಡಿ ಕುಟುಂಬದ 2 ಹೆಣ್ಣು ಮಕ್ಕಳಿಗೆ 1.10ಲಕ್ಷದ ಬಾಂಡ್ ನೀಡಲಾಗುತ್ತಿದೆ. ಮಹಿಳೆಯರು, ಮಕ್ಕಳ ಹಕ್ಕುಗಳಿಗೆ ಧಕ್ಕೆಯಾದಲ್ಲಿ, ದೌರ್ಜನ್ಯಗಳು ನಡೆದಲ್ಲಿ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ದೂರು ನೀಡಬೇಕು. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಸಮಾಜದ ಪ್ರತಿಯೊಬ್ಬರು ಸಹಕಾರ ನೀಡಬೇಕಿದೆ ಎಂದರು.

ವಿಕಾಸ ಸಂಸ್ಥೆ ಅಧ್ಯಕ್ಷ ಎಂ.ನಾಗರಾಜು ಮಾತನಾಡಿ, ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಅವರ ಸಮಸ್ಯೆ ಆಲಿಸಿ ಪರಿಹಾರ ದೊರಕಿಸಿಕೊಡುವ ಉದ್ದೇಶದಿಂದ ವಿಶೇಷ ಗ್ರಾಮಸಭೆ ಆಯೋಜಿಸುತ್ತಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ವರ್ಗ1ರಲ್ಲಿ ಪರಿಶಿಷ್ಟ ಜಾತಿ ಪಂಗಡದ 120 ಮಹಿಳೆಯರಿಗೆ ಉಚಿತವಾಗಿ ಮಿಕ್ಸಿಗಳನ್ನು ವಿತರಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಮಹಾಲಕ್ಷ್ಮೀ, ಉಪಾಧ್ಯಕ್ಷ ಸತೀಶ್‌ಕುಮಾರ್, ಸದಸ್ಯರಾದ ಎಸ್.ಮಲ್ಲಯ್ಯ, ಮರಿಯಲ್ಲಗಯ್ಯ, ಕೃಷ್ಣಪ್ಪ, ಹರ್ಷ, ಜಗದಾಂಬಾ, ಲೀಲಾ, ಮಂಜುಳಾ, ವೀಣಾ, ಭಾಗ್ಯಮ್ಮ, ಸಿದ್ಧಮ್ಮ, ಪಿಡಿಒ ಸುನೀತಾ, ಕಾರ್ಯದರ್ಶಿ ಶ್ರೀನಿವಾಸಮೂರ್ತಿ, ಕರವಸೂಲಿಗಾರ ನಟರಾಜು ಮತ್ತಿತರರಿದ್ದರು.

ವಿದ್ಯಾರ್ಥಿಗಳ ಮನವಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಳಮಾರನಹಳ್ಳಿ ಸ.ಹಿ.ಪ್ರಾಥಮಿಕ ಶಾಲೆಗೆ ಅಗತ್ಯವಿರುವ ಪೀಠೋಪಕರಣ ವ್ಯವಸ್ಥೆ ಮಾಡಿಕೊಡುವಂತೆ, ಗೊಲ್ಲಹಳ್ಳಿಗ್ರಾಮದ ಶಾಲೆಗೆ ಅಗತ್ಯವಿರುವ ಪೀಠೋಪಕರಣ, ಕ್ರೀಡಾಸಾಮಗ್ರಿ ಸೇರಿ ಶಾಲೆ ಆವರಣದಲ್ಲಿ ಕಸದ ರಾಶಿ ವಿಲೇವಾರಿ, ಶಾಲೆ ಮುಂಭಾಗದಲ್ಲಿನ ರಸ್ತೆಗೆ ರಸ್ತೆ ಉಬ್ಬುಗಳನ್ನು ಹಾಕಿಸುವುದು, ಮೈಲನಹಳ್ಳಿ ಶಾಲೆಯಲ್ಲಿ ಕಸ ವಿಲೇವಾರಿ ಸಮಸ್ಯೆ, ಜಿಂದಾಲ್ ಸಂಸ್ಥೆ ನಿರ್ಮಿಸಿರುವ ಶಾಲಾಕಟ್ಟಡ ವಿದ್ಯುತ್ ಸೌಕರ್ಯ ಕಲ್ಪಿಸಿಕೊಡುವುದು ಸೇರಿ ಯೋಗಾಭ್ಯಾಸಕ್ಕೆ ಅಗತ್ಯವಿರುವ ಮ್ಯಾಟ್ ಒದಗಿಸುವಂತೆ ಆಯಾ ಶಾಲಾ ವಿದ್ಯಾರ್ಥಿಗಳು ಮನವಿ ಮಾಡಿದರು. ಬೆಟ್ಟಹಳ್ಳಿ ಗ್ರಾಮದಲ್ಲಿ ನನೆಗುದಿಗೆ ಬಿದ್ದಿರುವ ಅಂಗನವಾಡಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸುವುದು, ಬೋಳಮಾರನಹಳ್ಳಿ ಅಂಗನವಾಡಿ ಕಟ್ಟಡ ದುರಸ್ತಿ ಮಾಡಿಸುವಂತೆ ಅಂಗನವಾಡಿ ಕಾರ್ಯಕರ್ತೆಯರು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net