ಶಿಥಿಲಾವಸ್ಥೆಯಲ್ಲಿ ಬಸ್ ನಿಲ್ದಾಣ

3 NLG 1
Published on

ನೀಲಪ್ಪ ಹೆಗ್ಗಣ್ಣವರ ನವಲಗುಂದ

ತಾಲೂಕಿನಿಂದ ಬೇರ್ಪಟ್ಟು ನೂತನ ಅಣ್ಣಿಗೇರಿ ತಾಲೂಕಿಗೆ ಸೇರ್ಪಡೆಯಾದ ಶಲವಡಿ ಗ್ರಾಮದಲ್ಲಿ ಬಸ್ ನಿಲ್ದಾಣದ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಹೀಗಾಗಿ, ಪ್ರಯಾಣಿಕರು ಬೀದಿಯಲ್ಲೇ ಮಳೆ, ಬಿಸಿಲಿನಲ್ಲಿಯೇ ಬಸ್​ಗೆ ಕಾಯುವಂತಾಗಿದೆ.

ಗ್ರಾಮದಲ್ಲಿ ನರಗುಂದ-ಗದಗ ರಾಜ್ಯ ಹೆದ್ದಾರಿ ಬದಿ 30 ವರ್ಷಗಳ ಹಿಂದೆ ನಿರ್ವಿುಸಿದ ಈ ಚಿಕ್ಕ ಬಸ್ ನಿಲ್ದಾಣ ಸಂಪೂರ್ಣ ಶಿಥಿಲಗೊಂಡಿದೆ. ಮೇಲ್ಛಾವಣಿಯ ಕಾಂಕ್ರೀಟ್, ಕಬ್ಬಿಣದ ಸರಳುಗಳು ಉದುರಿ ಬೀಳುತ್ತಿವೆ. ಕೆಲ ಸರಳುಗಳು ತುಕ್ಕು ಹಿಡಿದಿವೆ. ಹೀಗಾಗಿ, ಪ್ರಯಾಣಿಕರು ಪ್ರಾಣಭೀತಿಯಿಂದ ನಿಲ್ದಾಣದೊಳಗೆ ಕುಳಿತುಕೊಳ್ಳದೇ ಅದರ ಮುಂಭಾಗ ನಿಲ್ಲುತ್ತಾರೆ. ಬೇಸಿಗೆ, ಮಳೆಗಾಲದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ನವಲಗುಂದದಿಂದ 8 ಕಿಮೀ ದೂರದಲ್ಲಿರುವ ಶಲವಡಿಯು ಅಣ್ಣಿಗೇರಿ ತಾಲೂಕಿನಲ್ಲಿಯೇ ದೊಡ್ಡ ಗ್ರಾಮ. ಗದಗ, ನವಲಗುಂದ, ನರಗುಂದ, ರೋಣ, ಅಣ್ಣಿಗೇರಿ ಮತ್ತಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಗ್ರಾಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಶಿಕ್ಷಕರು, ಶಾಲೆ-ಕಾಲೇಜ್ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಇತರ ಪ್ರಯಾಣಿಕರು ಈ ಬಸ್ ನಿಲ್ದಾಣ ಮೂಲಕ ವಿವಿಧೆಡೆ ಪ್ರಯಾಣ ಬೆಳೆಸುತ್ತಾರೆ. ಬಸ್ ಸಂಚಾರ ವ್ಯವಸ್ಥೆ ಸರಿಯಿದ್ದರೂ ಸುಸಜ್ಜಿತ ಬಸ್ ನಿಲ್ದಾಣ ಇಲ್ಲದಿರುವುದು ಗ್ರಾಮಸ್ಥರಲ್ಲಿ ಬೇಸರವನ್ನುಂಟು ಮಾಡಿದೆ.

ಗ್ರಾಪಂ, ತಾಪಂ, ಸಂಬಂಧಿಸಿದ ಅಧಿಕಾರಿಗಳಿಗೆ ಮೌಖಿಕ ಮತ್ತು ಲಿಖಿತ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇನ್ನು ಮೇಲಾದರೂ ಸಂಬಂಧಪಟ್ಟ ಅಧಿಕಾರಿಗಳು ಶಿಥಿಲಗೊಂಡ ಬಸ್ ನಿಲ್ದಾಣವನ್ನು ನೆಲಸಮಗೊಳಿಸಿ ಸುಸಜ್ಜಿತ ಬಸ್ ನಿಲ್ದಾಣ ನಿರ್ವಿುಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶಲವಡಿ ಬಸ್ ನಿಲ್ದಾಣ ಶಿಥಿಲಗೊಂಡಿದೆ. ಪ್ರಯಾಣಿಕರು ಕುಳಿತುಕೊಳ್ಳಲು ಯೋಗ್ಯವಾಗಿಲ್ಲ. ರಾತ್ರಿ ಹೊತ್ತಾಯ್ತು ಎಂದರೆ ನಿಲ್ದಾಣದೊಳಗೆ ಕುಡುಕರ ಹಾವಳಿ ಜಾಸ್ತಿಯಾಗಿದೆ. ನಿತ್ಯ ಮದ್ಯ ಕುಡಿದ ತ್ಯಾಜ್ಯ ವಸ್ತುಗಳನ್ನು ಬಿಸಾಕುವುದರಿಂದ ಹೆಣ್ಣುಮಕ್ಕಳು, ವಿದ್ಯಾರ್ಥಿಗಳು ನಿಲ್ದಾಣಕ್ಕೆ ಬರಲು ಅಸಹ್ಯಪಟ್ಟುಕೊಳ್ಳುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸುಸಜ್ಜಿತ ಬಸ್ ನಿಲ್ದಾಣ ನಿರ್ವಿುಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. | ಸಿದ್ದು ಮುಳಗುಂದ ಗ್ರಾಮಸ್ಥ, ಶಲವಡಿ

ಶಲವಡಿ ಬಸ್ ನಿಲ್ದಾಣ ಹಾಳು ಕೊಂಪೆಯಾಗಿದೆ. ಪ್ರಯಾಣಿಕರು ನಿಲ್ದಾಣದಲ್ಲಿ ಕುಳಿತುಕೊಳ್ಳಲು ಆಸನಗಳಿಲ್ಲ. ಮೇಲ್ಛಾವಣಿಯು ಮಳೆಗಾಲದಲ್ಲಿ ಸೋರುತ್ತದೆ. ದುಸ್ಥಿತಿಯಲ್ಲಿರುವ ಈ ನಿಲ್ದಾಣದಿಂದ ಪ್ರಯಾಣಿಕರಿಗೆ ಅಪಾಯ ತಪ್ಪಿದ್ದಲ್ಲ. ಗ್ರಾಮಕ್ಕೆ ಶೋಭೆ ಬರಬೇಕಾದರೆ ಸುಸಜ್ಜಿತ ಬಸ್ ನಿಲ್ದಾಣ ನಿರ್ವಿುಸಬೇಕು. | ಎಂ.ಬಿ. ದಂಡಾವತಿಮಠ ಗ್ರಾಮಸ್ಥ, ಶಲವಡಿ

ಶಿಥಿಲಗೊಂಡ ಶಲವಡಿ ಬಸ್ ನಿಲ್ದಾಣ ದುರಸ್ತಿಗೊಳಿಸಲು 14ನೇ ಹಣಕಾಸು ಯೋಜನೆಯಡಿ 1 ಲಕ್ಷ ರೂ. ಮಂಜೂರಾತಿ ಪಡೆದುಕೊಂಡಿದ್ದೇವೆ. ಈ ಮುಂಚೆ ಹೊಸ ಬಸ್ ನಿಲ್ದಾಣ ನಿರ್ವಿುಸಲು ಬೇರೆಡೆ ಪಿಡಬ್ಲ್ಯುಡಿ ಜಾಗವನ್ನು ಪಡೆಯಲು ಗ್ರಾಪಂ ಸಭೆಯಲ್ಲಿ ಠರಾವು ಪಾಸ್ ಮಾಡಿದ್ದರು. ಪಿಡಬ್ಲ್ಯುಡಿಯವರು ಜಾಗವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದರೆ ಹೊಸ ಬಸ್ ನಿಲ್ದಾಣ ನಿರ್ವಿುಸುವ ಚಿಂತನೆಯಲ್ಲಿದ್ದೇವೆ. ಈ ಕುರಿತು ಶಾಸಕರಲ್ಲಿ ಹೊಸ ಪ್ರಸ್ತಾವನೆ ಮೂಲಕ ವರದಿ ಸಲ್ಲಿಸಿದೆ. ಇದಕ್ಕೂ ಮುನ್ನ ಶಿಥಿಲಗೊಂಡ ಬಸ್ ನಿಲ್ದಾಣವನ್ನು ಬೇಗನೆ ದುರಸ್ತಿಗೊಳಿಸಿ ಅನುಕೂಲ ಕಲ್ಪಿಸುತ್ತೇವೆ. | ಎ.ಡಿ. ಮುಲ್ಲಾನವರ, ಪಿಡಿಒ, ಶಲವಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net