ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ಮೈಸೂರಿನಲ್ಲಿ ಡಿ.14, 15 ರಂದು ‘ಶಾಲಾ ರಂಗ’ ಮಕ್ಕಳ ಹಬ್ಬ

Prakash Raj
Published on

ಮೈಸೂರು: ನಿರ್ದಿಗಂತ ಸಂಸ್ಥೆ ವತಿಯಿಂದ ಡಿ.14, 15 ರಂದು ನಗರದ ಕಲಾಮಂದಿರದ ಕಿರುರಂಗಮಂದಿರದಲ್ಲಿ ‘ಶಾಲಾ ರಂಗ’ ಮಕ್ಕಳ ಹಬ್ಬ ಆಯೋಜಿಸಲಾಗಿದೆ ಎಂದು ನಟ ಪ್ರಕಾಶ್‌ರಾಜ್ ತಿಳಿಸಿದರು.

‘ಶಾಲಾ ರಂಗ’ ಮಕ್ಕಳ ಹಬ್ಬಕ್ಕೆ ಡಿ.14 ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡುವರು. ಶಾಲಾರಂಗ ವಿಕಾಸ ಯೋಜನೆಯಲ್ಲಿ ತರಬೇತಿ ಹೊಂದಿದ ಮಕ್ಕಳು ಈ ಹಬ್ಬದಲ್ಲಿ ಪಾಲ್ಗೊಂಡು ನಾಟಕಗಳ ಪ್ರದರ್ಶನದ ಜತೆಗೆ ಹಾಡು, ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಉದ್ಘಾಟನಾ ಸಮಾರಂಭದ ನಂತರ ಬೆಳಗ್ಗೆ 11.30ಕ್ಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆರೂರಿನ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಮಕ್ಕಳಿಂದ ‘ರಿಂಗಿನಾಟ’ನಾಟಕ ಪ್ರದರ್ಶನ, ಮಧ್ಯಾಹ್ನ 3ಕ್ಕೆ ಹೊನ್ನಾವರ ತಾಲೂಕಿನ ಅಳ್ಳಂಕಿಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳಿಂದ ‘ಧರಣಿ ಮಂಡಲ’ ನಾಟಕ ಪ್ರದರ್ಶನ, ಸಂಜೆ 4ಕ್ಕೆ ವಿವಿಧ ಶಾಲಾ ಮಕ್ಕಳಿಂದ ರಂಗಶಿಬಿರ ಗೀತೆಗಳ ಪ್ರಸ್ತುತಿ, ಸಂಜೆ 5.30ಕ್ಕೆ ಪಿರಿಯಾಪಟ್ಟಣ ತಾಲೂಕಿನ ಗಿರಗೂರು ಮಿಳಿಂದ ಶಾಲೆಯ ಮಕ್ಕಳಿಂದ ‘ಚೋರ ಚರಣದಾಸ’ ನಾಟಕ ಪ್ರದರ್ಶನ, 6.30ಕ್ಕೆ ಮಕ್ಕಳಿಂದ ಕಥಾಭಿನಯ ಮತ್ತು ನೃತ್ಯ ಕಾರ್ಯಕ್ರಮ, ಸಂಜೆ 7.30ಕ್ಕೆ ನಿರ್ದಿಗಂತ ತಂಡದಿಂದ ಕಿಂದರಜೋಗಿ ಗೀತೆಗಳ ಪ್ರಸ್ತುತಿ ಇರಲಿದೆ ಎಂದರು.

ಡಿ.15ರಂದು ಬೆಳಗ್ಗೆ 10ಕ್ಕೆ ಮೈಸೂರಿನ ಕಲಿಯುವ ಮನೆ ಮಕ್ಕಳಿಂದ ‘ಬೆಳಕಿನ ಕಡೆಗೆ’ ನಾಟಕ, ಮಧ್ಯಾಹ್ನ 12ಕ್ಕೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಜಕ್ಕನಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮಕ್ಕಳಿಂದ ‘ಪ್ರೀತಿಯ ಕಾಳು’ ನಾಟಕ ಪ್ರದರ್ಶನವಿರುತ್ತದೆ. ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ ಎಂದರು.

ಶಾಲಾರಂಗ ವಿಕಾಸ ಎಂಬ ಪ್ರಾಯೋಗಿಕ ಯೋಜನೆಯಡಿಯಲ್ಲಿ ಐದು ರಂಗ ಶಿಕ್ಷಕರನ್ನು ರಾಜ್ಯದ 5 ವಸತಿ ಶಾಲೆಗಳಿಗೆ ನಿರ್ದಿಗಂತ ಸಂಸ್ಥೆಯಿಂದ ಕಳುಹಿಸಿ ಅವರು 6 ತಿಂಗಳ ಕಾಲ ಶಾಲೆಯಲ್ಲಿ ಶಿಕ್ಷಣ ಮತ್ತು ರಂಗಭೂಮಿಯ ವಿಷಯಗಳ ಬಗ್ಗೆ ಮಕ್ಕಳಿಗೆ ಕಲಿಸುತ್ತಾ, ಅಲ್ಲಿ ಪ್ರತಿ ವಾರಾಂತ್ಯ ರಂಗ ಪ್ರದರ್ಶನ, ಬಣ್ಣದ ಹೆಜ್ಜೆ ಶಿಬಿರ, ಕಾವ್ಯರಂಗ ಮುಂತಾದ ಚಟುವಟಿಕೆಗಳನ್ನು ನಡೆಸಿದ್ದಾರೆ. ಇದರ ಸಮಾರೋಪ ಸಮಾರಂಭದ ಅಂಗವಾಗಿ ಶಾಲಾರಂಗ ಮಕ್ಕಳ ಹಬ್ಬ ಹಮ್ಮಿಕೊಳ್ಳಲಾಗಿದೆ. 6 ತಿಂಗಳು ಕಲಿತಿರುವುದನ್ನು ಸುಮಾರು 150 ಮಕ್ಕಳು ರಂಗದ ಮೇಲೆ ಪ್ರದರ್ಶನ ನೀಡಲಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net