

ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ವತಿಯಿಂದ ಭಾನುವಾರ ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ‘ಶಕುಂತಲಾ ಜಯದೇವ ಶರಣ ಪ್ರಶಸ್ತಿ’ ಪ್ರದಾನ ಸಮಾರಂಭ ನೆರವೇರಿತು.
ಸಮಾರಂಭದಲ್ಲಿ ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಮಾಜ ಸೇವಕ ಮೈಸೂರಿನ ಜಿ.ಎ.ಶಿವಲಿಂಗಯ್ಯ, ಭದ್ರಾವತಿಯ ಡಾ.ಎಸ್.ಎಸ್.ವಿಜಯಾ (ಡಾ.ವಿಜಯದೇವಿ) ಅವರಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಪುರಸ್ಕೃತ ಜಿ.ಎ.ಶಿವಲಿಂಗಯ್ಯ ಮಾತನಾಡಿ, ಹೊಸದನ್ನು ಕಲಿತುಕೊಳ್ಳಲು ಆಸಕ್ತಿ ವಹಿಸಬೇಕು. ಇದೇ ಕಾರಣಕ್ಕೆ ಅನಿರೀಕ್ಷಿತವಾಗಿ ನನಗೆ ದೊರೆತ ಶಾಸನ ಓದುವ ಅವಕಾಶ ನನಗೆ ಬ್ರಾಹ್ಮಿ ಭಾಷೆಯನ್ನೇ ಕಲಿಯಲು ಪ್ರೇರಕವಾಯಿತು. ಇದರಿಂದ ಗತಿಸಿದ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು ಎಂದರು.
ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಇಂದು ನಾವು ಪ್ರಕೃತಿ ವಿಕೋಪ ಹಾಗೂ ವಾತಾವರಣ ಬದಲಾವಣೆಯಂತಹ ಸಮಸ್ಯೆ ಬಹು ದೊಡ್ಡ ಸಮಸ್ಯೆ ಎದುರಿಸುತ್ತಿದ್ದೇವೆ. ವಾತಾವರಣ ಬದಲಾವಣೆಯಿಂದ ಕೃಷಿಯ ಮೇಲೆ ಕೆಟ್ಟ ಪರಿಣಾಮ ಉಂಟಾಗಿ ಆಹಾರ ಸಮಸ್ಯೆ ತಲೆದೂರುತ್ತದೆ. ಪ್ರಕೃತಿ ವಿಕೋಪದಿಂದ ಜನಜೀವನವೇ ಅಸ್ತವ್ಯಸ್ಥವಾಗುತ್ತದೆ. ಇದಕ್ಕೆ ಮನುಷ್ಯನ ಪರಿಸರವಿರೋಧಿ ಚಟುವಟಿಕೆಗಳಿಗೆ ಕಾರಣ. ಆದರೆ ಹಿಂದೆ ಶಿವ ಶರಣರು ಮನುಕುಲಕ್ಕೆ ಒಳಿತು ಮಾಡುವ ತಂತ್ರಗಳನ್ನು ಬಳಕೆ ಮಾಡಿದರು. ಪರಿಸರಕ್ಕೆ ತೊಂದರೆಯಾಗದಂತೆ ಗುಣಾತ್ಮಕ ಜೀವನ ನಡೆಸುವುದು ಹೇಗೆ ಎಂಬುದನ್ನು ಹೇಳಿಕೊಟ್ಟಿದ್ದರು ಎಂದು ಸ್ಮರಿಸಿದರು.
ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ ಮಾತನಾಡಿ, ಶರಣ ಸಾಹಿತ್ಯ, ಸಂಸ್ಕೃತಿ ಸಂರಕ್ಷಣೆ, ಸಂಶೋಧನೆ, ಪ್ರಕಟಣೆ, ಪ್ರಸಾರದ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಶ್ರೀಮಠದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 1986ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದರು. ಪ್ರತಿ ವರ್ಷ ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಒಬ್ಬ ಮಹನೀಯ, ಒಬ್ಬ ಮಹಿಳೆಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಯು 20 ಸಾವಿರ ರೂ. ನಗದು, ಪ್ರಶಸ್ತಿ ಫಲಕ, ಸನ್ಮಾನವನ್ನು ಒಳಗೊಂಡಿದೆ ಎಂದು ತಿಳಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ. ಸೋಮಶೇಖರ, ದತ್ತಿ ದಾಸೋಹಿ ಶಕುಂತಲ ಜಯದೇವ ಇತರರಿದ್ದರು.